ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ಇದರ 2024-25 ನೇ ಸಾಲಿನ ಮಂಗಳೂರು ವಲಯ ಮಟ್ಟದ ತಾಂತ್ರಿಕ ಮಹಾವಿದ್ಯಾಲಯಗಳ ಥ್ರೋಬಾಲ್ ಪಂದ್ಯಾವಳಿಯು ಬಂಟಕಲ್ಲಿನ ಶ್ರೀ ಮಧ್ವ ವಾದಿರಾಜ ತಾಂತ್ರ್ರಿಕ ಮಹಾವಿದ್ಯಾಲಯದಲ್ಲಿ 10 ಡಿಸೆಂಬರ್ 2024 ರಂದು ನಡೆಯಿತು.
ಈ ಪಂದ್ಯಾವಳಿಯ ಉದ್ಘಾಟನಾ ಸಮಾರಂಭದಲ್ಲಿ ಕಾಪು ತಾಲೂಕು, ತಹಶೀಲ್ದಾರು ಹಾಗೂ ತಾಲೂಕು ದಂಡಾಧಿಕಾರಿಯಾದ ಶ್ರೀಮತಿ ಪ್ರತಿಭಾ ಆರ್, ಕೆಎಎಸ್ ಇವರು ಮುಖ್ಯ ಅತಿಥಿಗಳಾಗಿ
ಭಾಗವಹಿಸಿದ್ದರು.ಈ ಸಂದರ್ಭದಲ್ಲಿ ಮಾತನಾಡಿ ದೈಹಿಕ ಶಿಕ್ಷಣದ ಪ್ರಾಮುಖ್ಯತೆಯ ಬಗ್ಗೆ ತಿಳಿಸಿದರು ಹಾಗೂ ತಮ್ಮ ವೈಯಕ್ತಿಕ ಅನುಭವಗಳನ್ನು ವಿದ್ಯಾರ್ಥಿಗಳಲ್ಲಿ ಹಂಚಿಕೊಂಡರು.ಮಹಿಳೆಯರು ತಮ್ಮ ಜೀವನದ ಅನೇಕ ಪಾತ್ರವನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಿದರೂ ಸಹ, ಸಾಸಿವೆಯಷ್ಟು ಗೆಲುವನ್ನು ಪಡೆಯಲು ಸಮುದ್ರದಷ್ಟು
ಶ್ರಮಪಡಬೇಕೆಂದು ತಿಳಿಸಿದರು. ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಕೂಟದಲ್ಲಿ ಉತ್ಸಾಹದಿಂದ ಭಾಗವಹಿಸಿದಕ್ಕಾಗಿ ಅಭಿನಂದಿಸಿದರು.
ಗೌರವ ಅತಿಥಿಗಳಾಗಿ ಸಂಸ್ಥೆಯ ಆಡಳಿತ ಮಂಡಳಿಯ
ಸದಸ್ಯರಾದ ಶ್ರೀ ಹರೀಶ್ ಬೆಳ್ಮಣ್ ಭಾಗವಹಿಸಿದ್ದರು. ಸಂಸ್ಥೆಯ ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ವಿದ್ಯಾರ್ಥಿನಿಯರು ತಮ್ಮ ಜೀವನದಲ್ಲಿ ಡಾ. ಪ್ರತಿಭಾ ಆರ್ ಇವರನ್ನು ಮಾದರಿಯಾಗಿ ಪರಿಗಣಿಸಿ ಉತ್ತಮ ಸಾಧನೆಯನ್ನು ಮಾಡುವಂತೆ ತಿಳಿಸಿದರು ಹಾಗೂ ಕ್ರೀಡಾ ಕೂಟದಲ್ಲಿ
ಭಾಗವಹಿಸಿದ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ವಿವಿಧ ಇಂಜಿನಿಯರಿಂಗ್ ಕಾಲೇಜಿನ ಒಟ್ಟು ಒಂಭತ್ತು ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು. ಈ ಪಂದ್ಯಾವಳಿಯಲ್ಲಿ ಸೈಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜು, ಮಂಗಳೂರು ಇಲ್ಲಿನ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದರೆ, ಸಂತ ಜೋಸೆಫ್
ಇಂಜಿನಿಯರಿಂಗ್ ಕಾಲೇಜು, ಮಂಗಳೂರು ಇಲ್ಲಿನ ವಿದ್ಯಾರ್ಥಿಗಳು ದ್ವಿತೀಯ ಸ್ಥಾನವನ್ನು ಪಡೆದರು.
ಪಂದ್ಯದಲ್ಲಿ ವಿಜೇತರಾದವರಿಗೆ ಸಂಸ್ಥೆಯ ಪ್ರಾಂಶುಪಾಲರು ಬಹುಮಾನ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ಪೌಲ್ ಸೂರಜ್ ಮತ್ತು ಶುಭಶ್ರೀ ಉಪಸ್ಥಿತರಿದ್ದರು.