ಉಡುಪಿ: ಎಸ್ ವಿಐಟಿಎಂ, ಬಂಟಕಲ್ ಕಾಲೇಜ್ ನಲ್ಲಿ ಇಂಜಿನೀಯರಿಂಗ್ ವಿದ್ಯಾರ್ಥಿಗಳ ನೂತನ ಕಾಲೇಜು ಸೇರ್ಪಡೆ ಕಾರ್ಯಕ್ರಮದಲ್ಲಿ ಉಡುಪಿಯ ನ್ಯಾಯವಾದಿ, ಸಾಮಾಜಿಕ ಹೋರಾಟಗಾರ ಪ್ರೇಮ್ ಪ್ರಸಾದ್ ಶೆಟ್ಟಿಯವರು ಇಂದು “ಸಮಾಜದ ಹಿಂದುಳಿದ ಜನರ ಪ್ರಗತಿಯಲ್ಲಿ ಯುವ ಜನರ ಪಾತ್ರ” ವಿಷಯದ ಕುರಿತಂತೆ ಅತಿಥಿ ಉಪನ್ಯಾಸವನ್ನು ನೀಡಿದರು.
ಈ ಸಂದರ್ಭದಲ್ಲಿ ಮಾತನಾಡುತ್ತಾ ಶ್ರೀಯುತರು, ಸುಮಾರು 140 ಕೋಟಿಗೂ ಅಧಿಕ ಜನ ಸಂಖ್ಯೆ ಹೊಂದಿರುವ ಭಾರತದಲ್ಲಿ, ಈ ಕಾಲಘಟ್ಟದಲ್ಲಿ ಶೇ.65% ಯುವಕರು 35 ವರ್ಷಕ್ಕಿಂತ ಕೆಳಪಟ್ಟು ಇದ್ದು, ದೇಶದ ಪ್ರಗತಿಯನ್ನು ಹೊಂದಲು ಯುವ ಶಕ್ತಿಯು ತಮ್ಮ ಶೈಕ್ಷಣಿಕ ಪ್ರಗತಿಯ ಜೊತೆ ಜೊತೆಯಲ್ಲಿ ಸಾಮಾಜಿಕವಾಗಿ ಹಿಂದುಳಿದವರ ಪ್ರಗತಿಯನ್ನು ಸಾಧಿಸುವಲ್ಲಿ ಪ್ರಮುಖ ಪಾತ್ರವಹಿಸುವ ಮಹತ್ತರ ಜವಾಬ್ದಾರಿಯನ್ನು ತಿಳಿಯಬೇಕು ಹಾಗೂ ಈ ಬಗ್ಗೆ ಕಾರ್ಯಪ್ರವೃತ್ತರಾಗಬೇಕು ಎಂದರು.
ದೇಶದ ಹಾಗೂ ವಿಶ್ವದ ವಿದ್ಯಮಾನಗಳ ಬಗ್ಗೆ ತಿಳಿದುಕೊಂಡು ಈ ನಿಟ್ಟಿನಲ್ಲಿ ಸಾಮಾಜಿಕ ಪರಿವರ್ತನೆ ತರಲು ಭಗತ್ ಸಿಂಗ್, ಮಹಾತ್ಮ ಗಾಂಧಿ, ವಿವೇಕಾನಂದ, ಸಾವಿತ್ರಿಬಾಯಿ ಫುಲೆ, ಮಾರ್ಟಿನ್ ಲೂಥರ್ ಕಿಂಗ್, ನೆಲ್ಸನ್ ಮಂಡೇಲಾ ಮಂಡೇಲಾ, ಅಬ್ದುಲ್ ಕಲಾಂರಂತಹ ಮಹಾನ್ ನಾಯಕರ ಸಾಧನೆಗಳ ಬಗ್ಗೆ ಅಧ್ಯಯನ ನಡೆಸಿ, ಅವರಿಂದ ಪ್ರೇರಣೆ ಪಡೆದು ತಾವು ಕೂಡಾ ಅವರಂತೆ ಸಾಮಾಜಿಕ ಪರಿವರ್ತನೆಯಲ್ಲಿ ತಮ್ಮ ಕೊಡುಗೆ ನೀಡಬೇಕು, ಆಗಲೇ ನಮ್ಮ ಸಮಾಜದ ನಿಜವಾದ ಪ್ರಗತಿ ಸಾಧ್ಯ. ತಮ್ಮ ಕೌಶಲ್ಯಗಳನ್ನು ವೃದ್ಧಿಸಿಕೊಂಡು ಉದ್ಯೋಗ ಪಡೆಯುವುದಷ್ಟೇ ಅಲ್ಲದೆ, ಉದ್ಯಮಿಗಳಾಗಿ ಇನ್ನಿತರರಿಗೂ ಉದ್ಯೋಗ ನೀಡುವ ನಿಟ್ಟಿನಲ್ಲಿ ಯೋಚಿಸಬೇಕು. ಹೀಗೆ ಆದಾಗಲೇ ಸಾಮಾಜಿಕವಾಗಿ ಹಿಂದುಳಿದವರ ಪ್ರಗತಿಗೆ ನಿಮ್ಮ ಕೊಡುಗೆ ನೀಡಿದಂತಾಗುತ್ತದೆ. ಸಮಾಜದ ರಥ ಎಳೆಯುವಲ್ಲಿ ದೂರ ನಿಂತು ನೋಡುತ್ತಾ ಕೂರದೆ ಸ್ವಯಂ ಪ್ರೇರಣೆಯಿಂದ ಧುಮುಕಿ ಎಳೆಯುವ ಸ್ವಯಂಸೇವಕರಾಗಿ” ಎಂದು ಕರೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಧ್ಯಾಪಕರಾದ ಶ್ರೀಮತಿ ಸವಿತಾ ಶೆಣೈ ಅತಿಥಿಗಳನ್ನು ಸ್ವಾಗತಿಸಿ, ಶ್ರೀಮತಿ ದೀಪಿಕಾರವರು ವಂದಿಸಿದರು.