ಬಂಟಕಲ್ ಕಾಲೇಜಿನ ವಿದ್ಯಾರ್ಥಿಗೆ “ಉತ್ತಮ ವಿದ್ಯಾರ್ಥಿ ಪ್ರಶಸ್ತಿ”

ಉಡುಪಿ: ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯ, ಬಂಟಕಲ್, ಉಡುಪಿ ಇಲ್ಲಿನ ಅಂತಿಮ ವರ್ಷದ ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ವಿದ್ಯಾರ್ಥಿಯಾದ ಪ್ರಸನ್ನ ಜಿ ಶೇಟ್ ಇವರು ಐಎಸ್‍ಟಿಇ ಕರ್ನಾಟಕ ರಾಜ್ಯ ವಿಭಾಗದ 2023 – 2024ನೇ ಸಾಲಿನ “ಉತ್ತಮ ವಿದ್ಯಾರ್ಥಿ ಪ್ರಶಸ್ತಿ”ಗೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಯು 2023-2024ರಲ್ಲಿ ಕಾಲೇಜಿನ ಐಎಸ್‍ಟಿಇ ವಿದ್ಯಾರ್ಥಿ ಘಟಕದಿಂದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವಲ್ಲಿ ಅತ್ಯಂತ ಸಕ್ರಿಯವಾಗಿ ತೊಡಗಿಸಿಕೊಂಡಿರುವುದನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ಕರ್ನಾಟಕ ಐಎಸ್‍ಟಿಇ ವತಿಯಿಂದ ನೀಡಲಾಗಿದೆ.

ಮಂಡ್ಯದ ಪಿ ಇ ಎಸ್‍ ಇಂಜಿನಿಯರಿಂಗ್ ಕಾಲೇಜಿನಲ್ಲಿ 07 ಜೂನ್ 2024ರಂದು ನಡೆದ 19ನೇ ಕರ್ನಾಟಕ ರಾಜ್ಯ ಮಟ್ಟದ ಐಎಸ್‍ಟಿಇ ವಿದ್ಯಾರ್ಥಿ ಸಮಾವೇಶದಲ್ಲಿ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಸತತವಾಗಿ ಏಳನೇ ಬಾರಿಗೆ ಈ
ಪ್ರಶಸ್ತಿಯು ತಮ್ಮ ವಿದ್ಯಾಸಂಸ್ಥೆಯ ವಿದ್ಯಾರ್ಥಿಗೆ ದೊರಕಿರುವುದಕ್ಕೆ ಸಂಸ್ಥಾಪಕರು ಹಾಗೂ ಆಡಳಿತ ಮಂಡಳಿಯ ಅಧ್ಯಕ್ಷರೂ ಆದ ಶ್ರೀ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು, ಕಾರ್ಯದರ್ಶಿಯವರಾದ ಶ್ರೀ ರತ್ನಕುಮಾರ್ ಮತ್ತು ಪ್ರಾಂಶುಪಾಲರಾದ ಡಾ.ತಿರುಮಲೇಶ್ವರ ಭಟ್ ರವರು ಹರ್ಷ ವ್ಯಕ್ತಪಡಿಸಿದ್ದಾರೆ.