ಬಂಟಕಲ್ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳಿಂದ ವಿನೂತನ ಮಾದರಿಯ ‘ಅಕ್ಕಿ ಗಿರಣಿಯ ಆವಿಷ್ಕಾರ’.

ಉಡುಪಿ: ಬಂಟಕಲ್ಲಿನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ಮೆಕ್ಯಾನಿಕಲ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಅಂಶುಮಾನ್, ಕೆ. ಎನ್. ಶ್ರೀಶ ಆಚಾರ್, ರೋಹನ್ ಯು ಪಾಲನ್ ಮತ್ತು ವಿಕ್ರಮ್ ಇವರುಗಳು ಮೆಕ್ಯಾನಿಕಲ್ ವಿಭಾಗದ ಪ್ರಾಧ್ಯಾಪಕರಾದ ಶ್ರೀ ಅನಂತ್ ಮೋಹನ್ ಮಲ್ಯ ಇವರ ಮಾರ್ಗದರ್ಶನದಲ್ಲಿ “ಡೊಮೆಸ್ಟಿಕ್ ರೈಸ್ ಮಿಲ್ ವಿತ್ ಡಿಸ್ಟೋನರ್” (ವಿನೂತನ ಮಾದರಿಯ ಅಕ್ಕಿ ಗಿರಣಿ) ಅನ್ನು ಅಭಿವೃದ್ಧಿ ಪಡಿಸಿರುತ್ತಾರೆ.

ಸಾಮಾನ್ಯವಾಗಿ ಸಣ್ಣ ಪ್ರಮಾಣದಲ್ಲಿ ಭತ್ತವನ್ನು ಬೆಳೆಯುವ ರೈತರು ತಾವು ಬೆಳೆದ ಭತ್ತವನ್ನು ಅಕ್ಕಿ ಗಿರಣಿಗಳಿಗೆ ಮಾರಾಟ ಮಾಡುತ್ತಾರೆ. ಕೈಗೆಟುಕುವ ವೆಚ್ಚದಲ್ಲಿ ಸಂಸ್ಕರಣೆಗೆ ಅಗತ್ಯವಾದ ಯಂತ್ರೋಪಕರಣಗಳು ಲಭ್ಯವಿಲ್ಲದ ಕಾರಣ ರೈತರು ಭತ್ತವನ್ನು ಅಕ್ಕಿಯಾಗಿ ಸಂಸ್ಕರಿಸುವುದಿಲ್ಲ. ರೈತರೇ ಭತ್ತವನ್ನು ಅಕ್ಕಿಯಾಗಿ ಸಂಸ್ಕರಿಸಿ ಮಾರಾಟ ಮಾಡಿದಲ್ಲಿ ರೈತರ ಆದಾಯ ಹೆಚ್ಚುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ವಿದ್ಯಾರ್ಥಿಗಳು ಈ ವಿನೂತನ ಮಾದರಿಯ ಯಂತ್ರವನ್ನು ಅಭಿವೃದ್ಧಿಪಡಿಸಿರುತ್ತಾರೆ. ಮೊದಲು ಈ ಯಂತ್ರವು ಭತ್ತದಿಂದ ಕಲ್ಲು ಮತ್ತು ಕಸಕಡ್ಡಿಗಳನ್ನು ಬೇರ್ಪಡಿಸುತ್ತದೆ. ನಂತರ ಭತ್ತದಿಂದ ಸಿಪ್ಪೆಯನ್ನು ಬೇರ್ಪಡಿಸಲಾಗುತ್ತದೆ ಮತ್ತು ಅಂತಿಮವಾಗಿ ಭತ್ತದ ಹೊಟ್ಟನ್ನು ಅಕ್ಕಿಯಿಂದ ಬೇರ್ಪಡಿಸಲಾಗುತ್ತದೆ, ಅಗತ್ಯವಿದ್ದರೆ ಇದೇ ಯಂತ್ರದ ಸಹಾಯದಿಂದ ಅಕ್ಕಿಯನ್ನು ಪಾಲಿಶ್ ಮಾಡಬಹುದಾಗಿದೆ. ಕಡಿಮೆ ಪ್ರಮಾಣದ ಭತ್ತ ಬೆಳೆಯುವ ರೈತರಿಗೆ ಇದು ವರದಾನವಾಗಿದೆ.

ವಿದ್ಯಾರ್ಥಿಗಳ ಈ ನೂತನ ಆವಿಷ್ಕಾರಕ್ಕಾಗಿ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್, ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥರಾದ ಡಾ. ರಾಜ ಯತೀಶ್ ಯಾದವ್‍ರವರು ಅಭಿನಂದಿಸಿರುತ್ತಾರೆ.