ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಿಂದ ಬೆಳೆಗಳಿಗೆ ರೋಗ ಕಂಡುಹಿಡಿಯುವ ವೆಬ್ ಅಪ್ಲಿಕೇಶನ್ ಅಭಿವೃದ್ಧಿ.

ಉಡುಪಿ: ಬಂಟಕಲ್ಲಿನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಅಂತಿಮ ವರ್ಷದ ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ವಿದ್ಯಾರ್ಥಿಗಳಾದ ರಹ ಮತ್ತು ನ್ನೀಸಾ, ರಾಶಿ, ರಿಮ್ಶಾ ಮತ್ತು ಸುಮಂತ್ ಮುತಾಲಿಕ್ ಇವರು ವಿಭಾಗದ ಪ್ರಾಧ್ಯಾಪಕಿಯಾದ ಚಂದನ ಇವರ ಮಾರ್ಗದರ್ಶನದಲ್ಲಿ ಬೆಳೆಗಳಿಗೆ ಬರುವ ರೋಗಗಳನ್ನು ಪೂರ್ವಭಾವಿಯಾಗಿ ಕಂಡುಹಿಡಿಯುವ ವೆಬ್ ಅಪ್ಲಿಕೇಶನ್ ಅನ್ನು ಅಭಿವೃದ್ಧಿ ಪಡಿಸಿದ್ದಾರೆ. ಸಾಮಾನ್ಯವಾಗಿ ಯಾವುದೇ ರಾಷ್ಟ್ರದ ಬೆನ್ನೆಲುಬಾಗಿ ಪರಿಗಣಿಸಲ್ಪಡುವ ಕೃಷಿಯು ಮಾನವ ಜೀವನ ಮತ್ತು ಆರ್ಥಿಕ ಸ್ಥಿರತೆ ಎರಡನ್ನೂ ಉಳಿಸಿಕೊಳ್ಳುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಆದರೆ ಆಧುನಿಕ ಯುಗವು ಗಮನಾರ್ಹ ಸಮಸ್ಯೆಗಳನ್ನು ಎದುರಿಸುತ್ತಿದ್ದು ಇವುಗಳಲ್ಲಿ ಮುಖ್ಯವಾದುದು ಇಂದು ಅಸ್ತಿತ್ವದಲ್ಲಿರುವ ಬೆಳೆರೋಗಗಳು, ಇದು ರೈತರ ಜೀವನವನ್ನು ಚಿಂತಾಜನಕವನ್ನಾಗಿಸಿ ಅವರ ಆರ್ಥಿಕ ಸ್ಥಿತಿಯನ್ನು ದುರ್ಬಲಗೊಳಿಸಿದೆ. ಈ ಎಲ್ಲಾ ಸಮಸ್ಯೆಗಳಿಂದ ರೈತರನ್ನು ಮುಕ್ತರನ್ನಾಗಿಸಲು ವಿದ್ಯಾರ್ಥಿಗಳು ಬೆಳೆಗಳಿಗೆ ಬರುವ ರೋಗಗಳನ್ನು ಪೂರ್ವಭಾವಿಯಾಗಿ ಕಂಡುಹಿಡಿಯಲು ಮತ್ತು ಸಮರ್ಪಕವಾಗಿ ಚಿಕಿತ್ಸೆ ಒದಗಿಸಲು ವಿನೂತನವಾದ ವೆಬ್ ಅಪ್ಲಿಕೇಶನ್ ಅನ್ನು ಅಭಿವೃದ್ಧಿ ಪಡಿಸಿದ್ದಾರೆ.

ಈ ವೆಬ್ ಅಪ್ಲಿಕೇಶನ್‍ನಲ್ಲಿ ಡೀಪ್ ಲರ್ನಿಂಗ್ ತಂತ್ರಜ್ಞಾನವನ್ನು ಬಳಸಲಾಗಿದೆ. ಈ ಯೋಜನೆಗೆ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್, ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ಮುಖ್ಯಸ್ಥರಾದ ಡಾ. ಗುರುಪ್ರಸಾದ್ ರವರು ಅಭಿನಂದಿಸಿರುತ್ತಾರೆ.