ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಯುನಿಕೋರ್ಟ್ ಕೋಡ್ ಫೆಸ್ಟ್ ಕಾರ್ಯಾಗಾರ

ಉಡುಪಿ: ಬಂಟಕಲ್‍ನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ದಿನಾಂಕ 15 ಮೇ 2024 ರಂದು ಮಂಗಳೂರಿನ ಪ್ರತಿಷ್ಠಿತ ತಂತ್ರಜ್ಞಾನ ಸಂಸ್ಥೆಯಾದ ಮಂಗಳೂರು ಇನ್ಫೋಟೆಕ್ ಸೊಲ್ಯೂಷನ್ ಪ್ರೈವೇಟ್ ಲಿಮಿಟೆಡ್‍ನ ಅಂಗ ಸಂಸ್ಥೆಯಾದ “ಯುನಿಕೋರ್ಟ್” ವತಿಯಿಂದ ಒಂದು ದಿನದ “ಕೋಡ್ ಫೆಸ್ಟ್” ಕಾರ್ಯಾಗಾರ ಮತ್ತು ಸ್ಪರ್ಧೆ ನಡೆಸಲಾಯಿತು. ಈ ಸ್ಪರ್ಧೆಯಲ್ಲಿ ಒಟ್ಟು 174 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕಾರ್ಯಕ್ರಮವನ್ನು ಯುನಿಕೋರ್ಟ್‍ನ ಮಾನವ ಸಂಪನ್ಮೂಲ ಅಧಿಕಾರಿಗಳಾದ ಶ್ರೀಮತಿ ಚಂದ್ರಾಣಿ ಮತ್ತು ತಂಡದವರು ನಡೆಸಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್ ಕಂಪೆನಿಯ ಮುಖ್ಯ ಅತಿಥಿಗಳನ್ನು ಸ್ವಾಗತಿಸಿ ಮಾತನಾಡಿ ವಿದ್ಯಾಥಿಗಳಿಗೆ ಕೋಡ್ ಫೆಸ್ಟ್ ನ ಪ್ರಾಮುಖ್ಯತೆಯ ಬಗ್ಗೆ ತಿಳಿಸಿದರು.

ವಿದ್ಯಾರ್ಥಿಗಳಿಗೆ ಕಾರ್ಯಾಗಾರದ ಮಾಹಿತಿಯ ನಂತರ ವಿದ್ಯಾರ್ಥಿಗಳು ಕೋಡ್ ಫೆಸ್ಟ್ ಸ್ಪರ್ಧೆಯಲ್ಲಿ ಭಾಗವಹಿಸಿದರು. ಕೋಡ್ ಫೆಸ್ಟ್ ನ ಇಂದಿನ ಸ್ಪರ್ಧೆಯಲ್ಲಿ ಪ್ರತೀ ತಂಡದಲ್ಲಿ ಮೂವರು ವಿದ್ಯಾರ್ಥಿಗಳಂತೆ 29 ತಂಡಗಳನ್ನು ಮುಂದಿನ ಐದು ಕಾರ್ಯಾಗಾರಗಳಿಗೆ ಆಯ್ಕೆ ಮಾಡಲಾಯಿತು. ಹಾಗೆಯೇ ಕಾರ್ಯಾಗಾರದಲ್ಲಿ ವಿಜೇತರಾದ ಎರಡು ತಂಡಗಳಿಗೆ ತಲಾ ರೂಪಾಯಿ ಹದಿನೈದು ಸಾವಿರದ ಬಹುಮಾನವನ್ನು ಯುನಿಕೋರ್ಟ್ ವತಿಯಿಂದ ನೀಡಿ ಗೌರವಿಸಲಾಯಿತು. ಕಾರ್ಯಕ್ರಮವನ್ನು ಗಣಕಯಂತ್ರ ವಿಭಾಗದ ವಿದ್ಯಾರ್ಥಿನಿಯಾದ ಕುಮಾರಿ ಕಾತ್ಯಾಯಿನಿ ನಿರೂಪಿಸಿ, ಸಂಸ್ಥೆಯ ಉದ್ಯೋಗ ಮತ್ತು ತರಬೇತಿ ಅಧಿಕಾರಿ ಡಾ. ಸಿ ಕೆ ಮಂಜುನಾಥ್ ವಂದಿಸಿದರು.