ಉಡುಪಿ: ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯ ಇದರ ಪ್ರಥಮ ವರ್ಷದ ವಿದ್ಯಾರ್ಥಿಗಳ 2023-24ನೇ ಸಾಲಿನ ಶಿಕ್ಷಕ-ರಕ್ಷಕರ ಎರಡನೇಯ ಸಭೆಯು ದಿನಾಂಕ 11 ಮೇ 2024 ರಂದು ಸಂಸ್ಥೆಯ ಆವರಣದಲ್ಲಿ ಆಯೋಜಿಸಲಾಗಿತ್ತು. ಇಂಜಿನಿಯರಿಂಗ್ ಕೋರ್ಸ್ನ ಬಗ್ಗೆ ಅರಿವು ಮೂಡಿಸುವುದು, ಸಂಸ್ಥೆಯ ನಿಯಮಗಳು ಮತ್ತು ವಿದ್ಯಾರ್ಥಿಗಳ ಕಾರ್ಯಕ್ಷಮತೆಯನ್ನು ಮೇಲ್ವಿಚಾರಣೆ ಮಾಡುವಲ್ಲಿ ಪೋಷಕರ ಪಾತ್ರದ ಬಗ್ಗೆ ತಿಳಿಸುವುದು ಈ ಸಭೆಯ ಮುಖ್ಯ ಉದ್ದೇಶವಾಗಿತ್ತು.
ಸಂಸ್ಥೆಯ ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್ ಸ್ವಾಗತಿಸಿ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು. ವಿದ್ಯಾರ್ಥಿಗಳು ಕಾಲೇಜಿನ ಬಹು ದೊಡ್ಡ ಆಸ್ತಿಯಾಗಿದ್ದು ಕಾಲೇಜಿನಲ್ಲಿರುವ ಸೌಲಭ್ಯವನ್ನು ಉತ್ತಮ ರೀತಿಯಲ್ಲಿ ಬಳಸಿಕೊಂಡು ಮುಂದಿನ ತಮ್ಮ ವೃತ್ತಿ ಜೀವನದಲ್ಲಿ ಉತ್ತಮ ಸಾಧನೆ ಮಾಡಬೇಕೆಂದು ಆಶಿಸಿದರು. ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗೆ ಪೋಷಕರು ವಿದ್ಯಾಸಂಸ್ಥೆಯೊಂದಿಗೆ ಕೈಜೋಡಿಸಬೇಕಾದ ಅನಿವಾರ್ಯತೆಯನ್ನು ಮನದಟ್ಟು ಮಾಡಿದರು.
ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಉಡುಪಿಯ ಡಾ. ಎ ವಿ ಬಾಳಿಗ ಆಸ್ಪತ್ರೆ ಇದರ ಹಿರಿಯ ವೈದ್ಯರಾದ ಡಾ. ವಿರೂಪಾಕ್ಷ ದೇವರಮನೆ ಇವರು ವಿದ್ಯಾರ್ಥಿಗಳ ಸಾಧನೆಯಲ್ಲಿ ಹೆತ್ತವರ
ಪಾತ್ರದ ಬಗ್ಗೆ ಮಾತನಾಡಿದರು. ಪೋಷಕರು ತಮ್ಮ ಸಮಯದ ಬಹುಪಾಲನ್ನು ಮಕ್ಕಳೊಂದಿಗೆ ಕಳೆಯಬೇಕು ಎಂದು ಸಲಹೆ ನೀಡಿದರು.
ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ರತ್ನಕುಮಾರ್ ಮಾತನಾಡಿ ಸಂಸ್ಥೆಯ ಮೇಲೆ ನಂಬಿಕೆ ಮತ್ತು ವಿಶ್ವಾಸವನ್ನು ಹೊಂದಿರುವ ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಕೃತಜ್ಞತೆ ಸಲ್ಲಿಸಿದರು. ವಿದ್ಯಾರ್ಥಿಗಳಿಗೆ ಉತ್ತಮ ಸೌಲಭ್ಯವನ್ನು ನೀಡುವಲ್ಲಿ ಕಾಲೇಜು ಮತ್ತು ಆಡಳಿತ ಮಂಡಳಿ ಬದ್ದವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಥಮ ಸೆಮಿಸ್ಟರ್ನ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ 38 ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಈ ಕಾರ್ಯಕ್ರಮವನ್ನು ಪ್ರಾಧ್ಯಾಪಕಿಯರಾದ ಡಾ. ರೆನಿಟಾ ಶರೋನ್ ಮೋನಿಸ್ ಮತ್ತು ಶ್ರೀಮತಿ ಸಂಧ್ಯಾ ಇವರು ಸಂಯೋಜಿಸಿದರು. ಗಣಕಯಂತ್ರ ವಿಭಾಗದ ಅಂತಿಮ ವರ್ಷದವ್ವಿದ್ಯಾರ್ಥಿಯಾದ ದರ್ಶನ್ ಪ್ರಾರ್ಥಿಸಿದರು. ಪ್ರಾಧ್ಯಾಪಕರಾದ ಶ್ರೀ ಸಚಿನ್ ಪ್ರಭು ಮತ್ತು ಶ್ರೀಮತಿ ಪ್ರೀತಿ ಇವರು ಕಾರ್ಯಕ್ರಮವನ್ನು ನಿರ್ವಹಿಸಿದರು.