ಫೆ.27: ಉಡುಪಿ ಜಿಲ್ಲಾ ಕ್ಯಾಟರಿಂಗ್ ಮಾಲೀಕರ ಅಸೋಸಿಯೇಷನ್ ಉದ್ಘಾಟನೆ

ಉಡುಪಿ: ಉಡುಪಿ ಜಿಲ್ಲೆಯಾದ್ಯಂತ ಇರುವ ವಿವಿಧ ಕ್ಯಾಟರಿಂಗ್ ಮಾಲೀಕರು ಒಗ್ಗೂಡಿಸಿ ನೂತನವಾಗಿ ಉಡುಪಿ ಜಿಲ್ಲಾ ಕ್ಯಾಟರಿಂಗ್ ಮಾಲೀಕರ ಅಸೋಸಿಯೇಷನ್ ಸ್ಥಾಪಿಸಿದ್ದು, ಇದರ ಉದ್ಘಾಟನೆ ಸಮಾರಂಭವು ಇದೇ ಫೆ. 27ರಂದು ಉಡುಪಿ ಸಂತೆಕಟ್ಟೆಯ ಗ್ರೀನ್ ಎಕ್ರೆಸ್ ಒಪನ್ ಗಾರ್ಡನ್ ನಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷ ನವೀನ್ ಅಮೀನ್ ಶಂಕರಪುರ ತಿಳಿಸಿದರು.

ಈ ಬಗ್ಗೆ ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದ ಅವರು, ಈಗಾಗಲೇ ಜಿಲ್ಲೆಯಾದ್ಯಂತ ಸುಮಾರು ಒಂದು ಸಾವಿರಕ್ಕೂ ಅಧಿಕ ಕ್ಯಾಟರಿಂಗ್ ಉದ್ಯಮ ನಡೆಸುತ್ತಿರುವ ಮಾಲೀಕರನ್ನು ಈ ಸಂಸ್ಥೆಯ ಮೂಲಕ ಸಂಘಟಿತಗೊಳಿಸುವ ಉದ್ದೇಶದಿಂದ ಈ ಸಂಸ್ಥೆಯು ಅಸ್ತಿತ್ವಕ್ಕೆ ಬಂದಿದೆ.

ಮುಂದಿನ ದಿನಗಳಲ್ಲಿ ಉದ್ಯಮವು ಎದುರಿಸಬೇಕಾದ ಸವಾಲುಗಳು ಮತ್ತು ಗ್ರಾಹಕರಿಗೆ ಅತ್ಯುತ್ತಮ ಸೇವೆ ಒದಗಿಸಿಕೊಡುವ ಬಗ್ಗೆ ಕಾಲಕಾಲಕ್ಕೆ ಅಭಿಪ್ರಾಯಗಳನ್ನು ಹಂಚಿಕೊಳ್ಳುವ ದೃಷ್ಟಿಯಿಂದ ಈ ಸಂಸ್ಥೆ ಸ್ಥಾಪನೆಗೊಂಡಿದೆ ಎಂದರು.

ಅಂದು ಸಂಜೆ 5.30ಕ್ಕೆ ನಡೆಯುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೇಮಾರು ಸಾಂದೀಪನಿ ಮಠದ ಈಶವಿಠಲ ದಾಸ ಸ್ವಾಮೀಜಿ, ಉಡುಪಿ ಧರ್ಮಪ್ರಾಂತ್ಯದ ವಿಕಾರ್ ಜನರಲ್ ಫರ್ಡಿನಾಂಡ್ ಗೊನ್ಸಾಲ್ವಿಸ್ ಆಶೀರ್ವಚನ ನೀಡಲಿದ್ದಾರೆ.

ಶಾಸಕರಾದ ಯಶ್ ಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಕರ್ನಾಟಕ ರಾಜ್ಯ ಕ್ಯಾಟರಿಂಗ್ ಫೆಡರೇಶನ್ ಅಧ್ಯಕ್ಷ ಜಿ.ಕೆ. ಶೆಟ್ಟಿ, ದಕ್ಷಿಣ ಕನ್ನಡ ಜಿಲ್ಲಾ ಕ್ಯಾಟರಿಂಗ್ ಮಾಲೀಕರ ಅಸೋಸಿಯೇಷನ್ ಅಧ್ಯಕ್ಷ ದೀಪಕ್ ಕೋಟ್ಯಾನ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಕಾರ್ಯದರ್ಶಿ ಗಣೇಶ್ ಸ್ಯಾಲಿಯಾನ್, ಕೋಶಾಧಿಕಾರಿ ದೀಕ್ಷಿತ್ ಶೆಟ್ಟಿ, ಉಪಾಧ್ಯಕ್ಷ ಜೂಲಿಯಸ್ ಲುವಿಸ್, ಪ್ರಜ್ವಲ್, ಭಾಸ್ಕ‌ರ್, ಶಶಾಂಕ್ ಉಪಸ್ಥಿತರಿದ್ದರು.