ಉಡುಪಿ: ಕಾರ್ಕಳ ತಾಲೂಕು ಮಡಿವಾಳ ಸಮಾಜ ಸೇವಾ ಸಂಘ ಹಾಗೂ ಮಡಿವಾಳ ಯುವ ಘಟಕ, ಮಡಿವಾಳ ಮಹಿಳಾ ಘಟಕದ ನೇತೃತ್ವದಲ್ಲಿ ಅಂತರ್ ಜಿಲ್ಲಾ ಮಟ್ಟದ ಆಹ್ವಾನಿತ ತಂಡಗಳ ಪುರುಷರ ಪ್ರೊ ಕಬಡ್ಡಿ ಹಾಗೂ ಮಹಿಳೆಯರ ತ್ರೋಬಾಲ್ ಪಂದ್ಯಾಟ “ಮಡಿವಾಳ ಮಾಚಿದೇವ ಟ್ರೋಫಿ-2025” ಅನ್ನು ಇದೇ ಫೆ. 23ರಂದು ಕಾರ್ಕಳ ಕಾಬೆಟ್ಟು ಸಮುದಾಯ ಭವನದ ವಠಾರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಯುವ ಘಟಕ ಅಧ್ಯಕ್ಷ ಸಂಪತ್ ಕುಮಾರ್ ಕಣಂಜಾರು ತಿಳಿಸಿದ್ದಾರೆ.
ಅವರು ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಡಿವಾಳ ಸಮಾಜ ಬಾಂಧವರನ್ನು ಸಂಘಟಿಸುವ ಮತ್ತು ಒಂದೇ ವೇದಿಕೆಯಲ್ಲಿ ಒಟ್ಟು ಸೇರಿಸುವ ನಿಟ್ಟಿನಲ್ಲಿ ಮಡಿವಾಳ ಮಾಚಿದೇವ ಟ್ರೋಫಿ-2025 ಯನ್ನು ಹಮ್ಮಿಕೊಳ್ಳಲಾಗಿದೆ. ಅಂದು ಬೆಳಗ್ಗೆ 9 ಗಂಟೆಗೆ ಶಾಸಕ, ಮಾಜಿ ಸಚಿವ ವಿ. ಸುನಿಲ್ ಕುಮಾರ್ ಅವರು ಮಾಚಿದೇವ ಟ್ರೋಫಿಗೆ ಚಾಲನೆ ನೀಡಲಿದ್ದಾರೆ.
ಕಾರ್ಕಳ ತಾಲೂಕು ಮಡಿವಾಳ ಸಮಾಜ ಸೇವಾ ಸಂಘದ ಅಧ್ಯಕ್ಷ ಸುರೇಶ್ ಮಡಿವಾಳ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಕೃಷ್ಣಯ್ಯ ಚಾರಿಟೇಬಲ್ ಟ್ರಸ್ಟ್ ಮುನಿಯಾಲು ಪ್ರವರ್ತಕ ಉದಯ ಶೆಟ್ಟಿ ಮುನಿಯಾಲು, ಮಾಚಿದೇವ ನಿಗಮದ ನಿಕಟಪೂರ್ವ ಅಧ್ಯಕ್ಷ ರಾಜು ಎಂ. ತಲ್ಲೂರು ಸಹಿತ ಅನೇಕ ಮುಖಂಡರು ಭಾಗವಹಿಸಲಿದ್ದಾರೆ ಎಂದರು.
ಅಂದು ಸಂಜೆ 4.30 ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಉದ್ಯಮಿ ಪ್ರಸಾದ್‌ರಾಜ್ ಕಾಂಚನ್, ಸಭಾಭವನ ಕಟ್ಟಡ ಸಮಿತಿ ಅಧ್ಯಕ್ಷ ಉದಯ್ ಸಾಲ್ಯಾನ್ ಅಜ್ಜಾಡಿ, ಸಮಾಜ ಸೇವಕ ಬೋಳ ಪ್ರಶಾಂತ್ ಕಾಮತ್, ಡಾ. ರವೀಂದ್ರ ಶೆಟ್ಟಿ ಬಜಗೋಳಿ ಕಾರ್ಕಳ, ಹಿಂದೂ ಮುಖಂಡ ರತ್ನಾಕರ ಅಮೀನ್, ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಸದಸ್ಯೆ ಶ್ಯಾಮಲಾ ಎಸ್. ಕುಂದರ್, ಉದ್ಯಮಿ ಸಂಜೀವ ಮಡಿವಾಳ ಕಾಬೆಟ್ಟು ಸಹಿತ ಅನೇಕರು ಭಾಗವಹಿಸುತ್ತಾರೆ ಎಂದು ತಿಳಿಸಿದರು.
ಮುಂಬೈ, ರಾಯಚೂರು, ಗದಗ ಸಹಿತ ನಾನಾ ಕಡೆಗಳಿಂದ 15 ತಂಡಗಳು ಹೆಸರನ್ನು ನೋಂದಾಯಿಸಿಕೊಂಡಿವೆ. ಪ್ರೊ ಕಬ್ಬಡಿ ವಿಜೇತರಿಗೆ ಪ್ರಥಮ 11111 ರೂ. ಹಾಗೂ ಟ್ರೋಫಿ, ದ್ವಿತೀಯ 7777 ಹಾಗೂ ಟ್ರೋಫಿ, ತೃತೀಯ 3333 ಹಾಗೂ ಟ್ರೋಫಿ, ಚತುರ್ಥ 2222 ರೂ ಹಾಗೂ ಟ್ರೋಫಿ, ಉತ್ತಮ ಹಿಡಿತಗಾರ ಟ್ರೋಫಿ, ಉತ್ತಮ ದಾಳಿಗಾರ ಟ್ರೋಫಿ, ಉತ್ತಮ ಸವ್ಯಸಾಚಿ ಟ್ರೋಫಿ ನೀಡಲಾಗುತ್ತದೆ. ತ್ರೋಬಾಲ್‌ನಲ್ಲಿ ಪ್ರಥಮ 5555 ರೂ. ಟ್ರೋಫಿ, ದ್ವಿತೀಯ 3333 ರೂ. ಹಾಗೂ ಟ್ರೋಫಿ, ಉತ್ತಮ ಸವ್ಯಸಾಚಿ ವಿಭಾಗದಲ್ಲಿ ಟ್ರೋಫಿ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಪ್ರಸಾದ್ ಕುಮಾರ್ ಐಸಿರ ಕುಕ್ಕುಂದೂರು, ಸದಾನಂದ್ ಸಾಲ್ಯಾನ್ ಕೆರ್ವಾಶೆ, ಸುಮಾ ಜಯಕರ ಮಡಿವಾಳ ನಕ್ರೆ, ಸವಿತಾ ಸುಧಾಕರ ಅಜೆಕಾರ್ ಉಪಸ್ಥಿತರಿದ್ದರು.












