ಫೆ.20ರಿಂದ ತಾಂಗದಗಡಿ ವೀರ ಮಾರುತಿ ವ್ಯಾಯಾಮ ಶಾಲೆಯ ದಶಮ ವರ್ಧಂತಿ, ಸುವರ್ಣ ಸಂಭ್ರಮ ಹಾಗೂ ತಾಲೀಮು ಗೊಬ್ಬುದ ಪಂಥ

ಉಡುಪಿ: ಶ್ರೀ ವೀರ ಮಾರುತಿ ವ್ಯಾಯಾಮ ಶಾಲೆ ಮತ್ತು ತರುಣ ಕಲಾ ವೃಂದ ಹಾಗೂ ಸುವರ್ಣ ಮಹೋತ್ಸವ ಸಮಿತಿ ತಾಂಗದಗಡಿ, ಉಡುಪಿ ಇದರ ಆಶ್ರಯದಲ್ಲಿ ಶ್ರೀ ಆಂಜನೇಯ ಸಹಿತ ಗಣಪತಿ ದೇವರ ಪುನರ್ ಪ್ರತಿಷ್ಠಾಪನೆಯ ದಶಮ ವರ್ಧಂತಿ ಹಾಗು ಸಂಸ್ಥೆಯ ಸುವರ್ಣ ಸಂಭ್ರಮವು ಫೆ.20 ರಿಂದ ಫೆ.22ರವರೆಗೆ ತಾಂಗದಗಡಿ ಆಂಜನೇಯ ಗುಡಿಯ ಬಯಲು ಮಂಟಪದಲ್ಲಿ ನಡೆಯಲಿದೆ ಎಂದು ಸುವರ್ಣ ಮಹೋತ್ಸವ ಸಮಿತಿಯ ಗೌರವ ಸಲಹೆಗಾರ ಸದಾನಂದ ನಾಯಕ್ ತಿಳಿಸಿದರು.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ತಾಲೀಮು ಶಿಕ್ಷಕ ದಿ. ಸುಬ್ರಹ್ಮಣ್ಯ (ಮಣಿ) ಸ್ಮರಣಾರ್ಥವಾಗಿ ಪ್ರಥಮ ಬಾರಿಗೆ ಅವಿಭಜಿತ ಜಿಲ್ಲೆಗಳ 10 ಆಹ್ವಾನಿತ ತಂಡಗಳ “ತಾಲೀಮು ಗೊಬ್ಬುದ ಪಂಥ” ಸ್ಪರ್ಧೆಯನ್ನು ಫೆ.20 ರಂದು ಸಂಜೆ 5.30 ಕ್ಕೆ ತಾಂಗದಗಡಿ ಬಯಲು ಮೈದಾನದಲ್ಲಿ ನಡೆಯಲಿದೆ ಎಂದರು.

ಪಂದ್ಯಾಕೂಟದಲ್ಲಿ ಪ್ರಥಮ ₹ 44,444, ದ್ವಿತೀಯ ₹ 33,333, ತೃತೀಯ ₹ 22,222 ನಗದು ಬಹುಮಾನ ನೀಡಿ ಗೌರವಿಸುತ್ತೇವೆ. ಒಂದು ತಂಡ 40 ನಿಮಿಷ ತಮ್ಮ ಕಸರತ್ತನ್ನು ಪ್ರದರ್ಶಿಸಲು ಅವಕಾಶ ನೀಡಲಾಗಿದೆ. ತೀರ್ಪುಗಾರರಾಗಿ ತುಳು ಜಾನಪದ ವಿದ್ವಾಂಸ ಕೆ.ಕೆ ಪೇಜಾವರ, ಹಿರಿಯ ತಾಲೀಮು ಶಿಕ್ಷಕ ನವೀನ್ ಕುಮಾರ್, ಹಿರಿಯ ತಾಲೀಮು ಪಟು ಪಿ.ರಾಜ‌.ಶೆಟ್ಟಿ ಭಾಗವಹಿಸಲಿದ್ದಾರೆ ಎಂದರು.

ಪಂದ್ಯಕೂಟವನ್ನು ವಜ್ರದೇಹಿ ಮಠದ ಶ್ರೀ ರಾಜಾಶೇಖರಾನಂದರು ಉದ್ಘಾಟಿಸಲಿದ್ದಾರೆ. ಕಾಣಿಯೂರು ಶ್ರೀ ವಿದ್ಯಾವಲ್ಲಭತೀರ್ಥರು, ಶಿರೂರು ಶ್ರೀ ವೇದವರ್ಧನತೀರ್ಥರು ಅನುಗ್ರಹ ಸಂದೇಶ ನೀಡಲಿದ್ದಾರೆ. ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ.ನಿ.ಬೀ ವಿಜಯ್ ಬಲ್ಲಾಳ್, ಸಂಸದ ಕೋಟ ಶ್ರೀನಿವಾಸ್ ಪೂಜಾರಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಮಾಜಿ ಶಾಸಕ ರಘುಪತಿ ಭಟ್ ಸೇರಿದಂತೆ ಮೊದಲಾದ ಗಣ್ಯರು ಭಾಗವಹಿಸಲಿದ್ದಾರೆ. ಅಂದು ಬೆಳಗ್ಗೆ ದಿ.ಟಿ.ಕೃಷ್ಣಪ್ಪನವರ ಪುತ್ಥಳಿಯನ್ನು ನಗರಸಭೆ ಅಧ್ಯಕ್ಷ ಪ್ರಭಾಕರ್ ಪೂಜಾರಿ ಅನಾವರಣಗೊಳಿಸಲಿದ್ದಾರೆ ಎಂದರು.

ಫೆ.22 ರಂದು ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6 ಕ್ಕೆ ದಿ.ಟಿ.ಕೃಷ್ಣಪ್ಪ ವೇದಿಕೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಶಾಸಕ ಯಶ್ಪಾಲ್ ಸುವರ್ಣ, ಉದ್ಯಮಿಗಳಾದ ಹರಿಯಪ್ಪ ಕೋಟ್ಯಾನ್, ಪ್ರವೀಣ್ ಶೆಟ್ಟಿ ಪುಣೆ, ನಗರಸಭಾ ಸದಸ್ಯ ಸಂತೋಷ್ ಜತ್ತನ್ ಭಾಗವಹಿಸಲಿದ್ದಾರೆ. ಆದಿತಿ ಬಿಲ್ಡರ್ಸ್‌ನ ರಂಜನ್‌‌.ಕೆ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ಅಂದು ಸಂಜೆ 8.30 ಕ್ಕೆ ಸ್ಥಳೀಯರಿಂದ ನೃತ್ಯ ಕಾರ್ಯಕ್ರಮ ನಡೆಯಲಿದೆ. ನಂತರ ತುಳು ಹಾಸ್ಯಮಯ ” ಅಂಚನೆ ಆವೋಡು” ನಾಟಕ ಪ್ರದರ್ಶನಗೊಳ್ಳಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷ ಮನೋಜ್ ಕುಮಾರ್, ಪ್ರಮುಖರಾದ ಶಿತಿಲ್.ಆರ್.ಪೂಜಾರಿ, ರಾಹುಲ್ ಆಮೀನ್, ಪ್ರಕಾಶ್ ಶೆಟ್ಟಿ ಉಪಸ್ಥಿತರಿದ್ದರು.