ಉಡುಪಿ: ಛತ್ರಪತಿ ಶ್ರೀ ಶಿವಾಜಿ ಅಭಿಮಾನಿ ಬಳಗದ ವತಿಯಿಂದ ಬಸ್ರೂರು ಸ್ವಾತಂತ್ರ್ಯ ದಿನ ಮಹೋತ್ಸವ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಶೋಭಾಯಾತ್ರೆ ಇದೇ ಫೆ.13ರಂದು ಬಸ್ರೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಉಮೇಶ್ ಆಚಾರ್ಯ ಹೇಳಿದರು.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಈ ಮಹೋತ್ಸವದಲ್ಲಿ ಗೋವಾದ ಮುಖ್ಯಮಂತ್ರಿ ಡಾ.ಪ್ರಮೋದ್ ಪಾಂಡುರಂಗ ರಾವ್ ಸಾವಂತ್ ಅತಿಥಿಯಾಗಿ ಭಾಗವಹಿಸಲಿದ್ದಾರೆ. ದೇವಸ್ಥಾನದ ಆಡಳಿತ ಮೊಕ್ತೇಸರ ಬಿ. ಅಪ್ಪಣ್ಣ ಹೆಗ್ಡೆ ಅಧ್ಯಕ್ಷತೆ ವಹಿಸಲಿದ್ದಾರೆ.
ಕೊಡಗಿನ ರಾಷ್ಟ್ರೀಯವಾದಿ ನಾಟಕಕಾರ ಅಡ್ಡಂಡ ಸಿ. ಕಾರ್ಯಪ್ಪ ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದರು.ಅಂದು ಬೆಳಿಗ್ಗೆ 9 ಗಂಟೆಗೆ ದೇವಸ್ಥಾನದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನೆರವೇರಲಿದೆ. ಮಧ್ಯಾಹ್ನ 11.30ಕ್ಕೆ ನಡೆಯುವ ಧಾರ್ಮಿಕ ಸಭೆಯಲ್ಲಿ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಪ್ರವಚನ ನೀಡಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಗಂಗೊಳ್ಳಿಯಿಂದ ಹಡಗಿನಲ್ಲಿ ಹೊರಟು, ಬಸ್ರೂರು ಮಂಡಿಕೇರಿ ಹೊಳೆಬಾಗಿಲಿನಿಂದ ದೇವಸ್ಥಾನದವರೆಗೆ ಭವ್ಯ ಶೋಭಾಯಾತ್ರೆ ನಡೆಯಲಿದೆ. ನಂತರ 5.30ರಿಂದ ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಡಾ.ಸಂದೀಪ್‌ರಾಜ್ ಮಹಾದೇವರಾವ್ ಮಹಿಂದ್, ಬಳಗದ ಕಾರ್ಯದರ್ಶಿ ರಾಜೇಶ್ ಜಿ. ಕೆಳಮನೆ, ಸಂಚಾಲಕರಾದ ಸುಧೀರ್ ಮೇರ್ಡಿ ಮತ್ತು ಸುರೇಶ್ ಕೃಷ್ಣ ನಾಯಕ್ ಉಪಸ್ಥಿತರಿದ್ದರು.












