ಪ್ರಯಾಗ್ ರಾಜ್:ಮಹಾ ಕುಂಭಮೇಳದಲ್ಲಿ ಮೌನಿ ಅಮಾವಾಸ್ಯೆಯಂದು ಕಾಲ್ತುಳಿತ ದುರಂತದ ಬಳಿಕ ಬಿಗಿ ಕ್ರಮ;ಯಾತ್ರಿಕರಿಗೆ ಈಗ ನಡೆಯುವುದೇ ಸವಾಲು

ಪ್ರಯಾಗ್ ರಾಜ್ : ಮಹಾ ಕುಂಭಮೇಳದಲ್ಲಿ ಮೌನಿ ಅಮಾವಾಸ್ಯೆಯಂದು ಕಾಲ್ತುಳಿತ ದುರಂತ ಸಂಭವಿಸಿದ ಬಳಿಕ ಬಿಗಿ ಕ್ರಮಗಳನ್ನು ಆಡಳಿತ ಕೈಗೊಂಡಿದ್ದು, ಯಾತ್ರಿಕರಿಗೆ ಪುಣ್ಯ ಸ್ಥಳದಲ್ಲಿ ಈಗ ಪಾದಯಾತ್ರೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.

ಅನೇಕರು ಸಂಗಮದ ಸಮೀಪದ ಸ್ಥಳಕ್ಕೆ ನಾಲ್ಕು ಚಕ್ರದ ವಾಹನಗಳ ಪ್ರವೇಶಕ್ಕೆ ಅವಕಾಶ ನೀಡದ ಕಾರಣ ಕಿಲೋಮೀಟರ್ ಗಟ್ಟಲೆ ನಡೆದು ಕ್ರಮಿಸಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ. ಸಹಾಸ್ರಾರು ಸಾಮಾನ್ಯ ಭಕ್ತರು ಕಾಲ್ನಡಿಗೆಯಲ್ಲಿ ಬಹಳ ದೂರ ನಡೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ಎಲ್ಲರಿಗೂ ಹೆಚ್ಚು ಬೇಡಿಕೆಯಿರುವ ಶಟಲ್ ಅಥವಾ ಇ-ರಿಕ್ಷಾವನ್ನು ಹಿಡಿಯುವುದು ಸಾಧ್ಯವಾಗಿಲ್ಲ.

ಮುಖ್ಯ ನಗರದಿಂದ ಸುಮಾರು 10 ಕಿಮೀ ದೂರದಲ್ಲಿರುವ ಬೇಲಿ ಕಚಾರ್‌ನಲ್ಲಿ ತ್ರಿವೇಣಿ ಸಂಗಮಕ್ಕೆ ಯಾವುದೇ ಲಭ್ಯವಿರುವ ಸಾರಿಗೆ ಮೂಲಕ ಅಥವಾ ಕಾಲ್ನಡಿಗೆಯಲ್ಲಿ ತೆರಳಲು ಅವಕಾಶ ನೀಡಲಾಗಿದೆ. ಮೊದಲು ಯಾತ್ರಾರ್ಥಿಗಳು ತಮ್ಮ ವಾಹನಗಳನ್ನು ಸುಲಭವಾಗಿ ನಿಲುಗಡೆ ಮಾಡಲು ಅನುಕೂಲವಾಗುವಂತೆ ದೊಡ್ಡ ಪಾರ್ಕಿಂಗ್ ಪ್ರದೇಶಗಳನ್ನು ಸ್ಥಾಪಿಸಲಾಗಿದೆ ಎಂದು ಅನೇಕ ಯಾತ್ರಿಕರು ಹೇಳಿದ್ದಾರೆ.

ಮೌನಿ ಅಮವಾಸ್ಯೆಗೆ ಬಂದ ಹೆಚ್ಚಿನ ಭಕ್ತರು ಸದ್ಯ ಹಿಂತಿರುಗುತ್ತಿದ್ದಾರೆ. ಬ್ಯಾರಿಕೇಡ್‌ಗಳನ್ನು ತೆಗೆದುಹಾಕಲು ಪೊಲೀಸರಿಗೆ ಸೂಚನೆ ನೀಡಲಾಗಿದೆ. ಜನವರಿ 31, ಫೆಬ್ರವರಿ 1 ಮತ್ತು ಫೆಬ್ರವರಿ 4 ರಂದು ವಾಹನ ಪ್ರವೇಶಕ್ಕೆ ಯಾವುದೇ ನಿರ್ಬಂಧಗಳಿಲ್ಲ. ಬಸಂತ್ ಪಂಚಮಿ ಸ್ನಾನದ ಹಬ್ಬಕ್ಕಾಗಿ ಫೆಬ್ರವರಿ 2 ಮತ್ತು 3 ರಂದು ಹೆಚ್ಚಿನ ನಿರ್ಬಂಧಗಳು ಇರುತ್ತವೆ ಎಂದು ಪ್ರಯಾಗರಾಜ್ ಜಿಲ್ಲಾ ಮ್ಯಾಜಿಸ್ಟ್ರೇಟ್ ರವೀಂದ್ರ ಕುಮಾರ್ ಮಂದರ್ ತಿಳಿಸಿದ್ದಾರೆ.

ಕುಂಭ ಮೇಳ ಪ್ರದೇಶದಲ್ಲಿ ವಾಹನಗಳ ಪ್ರವೇಶಕ್ಕೆ ಪ್ರತ್ಯೇಕ ಪ್ರಕ್ರಿಯೆ ಇದೆ, ಇದನ್ನು ಉನ್ನತ ಅಧಿಕಾರಿಗಳು ಮತ್ತು ಡಿಐಜಿಯವರು ತಿಳಿಸುತ್ತಾರೆ” ಎಂದು ರವೀಂದ್ರ ಕುಮಾರ್ ತಿಳಿಸಿದ್ದಾರೆ.

“ಪೊಲೀಸರು ಭಕ್ತರಿಗೆ ಖಾಸಗಿ ವಾಹನಗಳನ್ನು ಹತ್ತಲು ಸಹಕರಿಸುತ್ತಿದ್ದಾರೆ. ಆದರೆ ಚಾಲಕರು ದೂರದ ಪ್ರಯಾಣಿಕರನ್ನು ಹತ್ತಿಸದ ಹೊರತು ಮುಂದೆ ಹೋಗಲು ನಿರಾಕರಿಸುತ್ತಿರುವುದೂ ಸಮಸ್ಯೆಯಾಗುತ್ತಿದೆ.

”ಶುಕ್ರವಾರ(ಜ31) ಜಿಲ್ಲೆಯ ಸಂಚಾರ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದೆ. ಮಹಾ ಕುಂಭದಿಂದಾಗಿ ಸಾಮಾನ್ಯಕ್ಕಿಂತ ಹೆಚ್ಚುವರಿ ದಟ್ಟಣೆಯ ಹೊರತಾಗಿ, ಪರಿಸ್ಥಿತಿ ನಿಯಂತ್ರಣದಲ್ಲಿದೆ. ಸುಗಮ ಸಂಚಾರವನ್ನು ಖಚಿತಪಡಿಸಿಕೊಳ್ಳಲು ಮತ್ತು ನಿರ್ಣಾಯಕ ಹಂತಗಳಲ್ಲಿ ಅದನ್ನು ನಿಯಂತ್ರಿಸಲು ನಾವು ವಿವಿಧ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸುತ್ತಿದ್ದೇವೆ” ಎಂದು ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

“ಪ್ರಮುಖ ಪ್ರದೇಶಗಳಲ್ಲಿ ಜನ ದಟ್ಟಣೆಯನ್ನು ಗಮನಿಸಲಾಗಿದೆ. ಹೊರಗಿನ ವಾಹನಗಳ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕಲಾಗಿದೆ, ಗೊತ್ತುಪಡಿಸಿದ ಪಾರ್ಕಿಂಗ್ ಪ್ರದೇಶಗಳನ್ನು ತಲುಪಲು ಅವಕಾಶ ನೀಡಿದ್ದೇವೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾಲ್ತುಳಿತ ಸಂಭವಿಸಿದ ಬಳಿಕ ಅನೇಕರು ಅಯೋಧ್ಯೆ ಮತ್ತು ವಾರಾಣಸಿಯಲ್ಲೇ ಉಳಿದುಕೊಂಡಿದ್ದು ಈಗ ಪ್ರಯಾಗ್ ರಾಜ್ ನತ್ತ ಬರುತ್ತಿದ್ದಾರೆ. ರೈಲುಗಳಲ್ಲಿಯೂ ಅಪಾರ ಜನ ಸಂದಣಿ ಇದ್ದು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅನೇಕರು ನಿಗದಿಯಾಗಿದ್ದ ರೈಲುಗಳಲ್ಲಿ ಪ್ರಯಾಣಿಸಲು ಸಾಧ್ಯವಾಗದೆ ಪರದಾಡಬೇಕಾಗಿದೆ.

ಜನವರಿ 13 ಮತ್ತು ಫೆಬ್ರವರಿ 26 ರವರೆಗೆ ನಡೆಯಲಿರುವ ಮಹಾಕುಂಭದಲ್ಲಿ ಇದುವರೆಗೆ ಸುಮಾರು 30 ಕೋಟಿ ಭಕ್ತರು ತೀರ್ಥ ಸ್ನಾನ ಮಾಡಿದ್ದಾರೆ.

ಮ್ಯಾಕ್ಸರ್ ಟೆಕ್ನಾಲಜೀಸ್ ಒದಗಿಸಿದ ಈ ಉಪಗ್ರಹ ಚಿತ್ರವು ಸಂಗಮ ಸ್ಥಳದಲ್ಲಿ ಭಕ್ತರನ್ನು ನೋಡಬಹುದಾಗಿದೆ.