ಮೂಡುಬಿದಿರೆ: ಕೃಷ್ಣ ಬರಿಯ ನಾಯಕತ್ವ ಗುಣ ಹೊಂದಿದವನಲ್ಲ ಆತ ನಾಯಕತ್ವದ ನಿರ್ಮಾತೃ ಎಂದು ಯಕ್ಷಗಾನ ಸಂಘಟಕ ಹಾಗೂ ಪ್ರವಚನಕಾರ ಉಜಿರೆ ಅಶೋಕ ಭಟ್ಟ ನುಡಿದರು.
ಅವರು ಮಂಗಳವಾರ ಆಳ್ವಾಸ್ ಸ್ವಾಯತ್ತ ಕಾಲೇಜಿನ ಸಂಸ್ಕೃತ ವಿಭಾಗದ ಪ್ರಜ್ಞಾ ಜಿಜ್ಞಾಸ ವೇದಿಕೆ, ಕುವೆಂಪು ಸಭಾಂಗಣದಲ್ಲಿ ಆಯೋಜಿಸಿದ್ದ ‘ನಾಯಕತ್ವದ ನಿರ್ಮಾಣದಲ್ಲಿ ಕೃಷ್ಣನ ಕೊಡುಗೆ’ ವಿಷಯದ ಕುರಿತು ಮಾತನಾಡಿದರು.
ರಾಮ, ಕೃಷ್ಣ ದೇವರಲ್ಲ, ಬದಲಾಗಿ ಅವರು ಯುಗಧರ್ಮದ ನಾಯಕರು. ಕೇವಲ ಭಾವುಕ ಭಕ್ತಿಯಿಂದ ಅವರನ್ನು ದೇವರು ಅಂತ ನೋಡಬೇಕಿಲ್ಲ, ಪ್ರಾಯೋಗಿಕವಾಗಿ ನೋಡಬೇಕು. ರಾಮ ಅತ್ಯಂತ ಶ್ರೇಷ್ಠ ಜಾತ್ಯಾತೀತ ಎಂದು ತಿಳಿಸಿದರು.
ಭಗವದ್ಗೀತೆಯಲ್ಲಿ ತಿಳಿಸಿರುವಂತೆ ಮನುಷ್ಯ ತನ್ನ ಆತ್ಮವನ್ನು ತಾನು ಉದ್ಧರಿಸಿಕೊಳ್ಳಬೇಕು. ಕೃಷ್ಣ ವಿಕಾರಕ್ಕೆ ಆಕಾರ ಕೊಟ್ಟ. ಪ್ರಾಕೃತ ಸಂಗತಿಗಳಿಗೆ ಸಂಸ್ಕಾರ ಕೊಟ್ಟ. ಕ್ರಿಯೆಗೆ ಪ್ರಯೋಗಶೀಲತೆ ನೀಡಿದ. ಕೃಷ್ಣ ಕ್ಷೀರ, ಕೃಷಿ ಹಾಗೂ ಅಕ್ಷರ ಕ್ರಾಂತಿಗಳ ಹರಿಕಾರ.
ಎಲ್ಲರಲ್ಲೂ ಜಾಗೃತಿ ಮೂಡಿಸುವ ಕೃಷ್ಣ, ಸ್ಥಿತಪ್ರಜ್ಞೆಯ ಮೂರ್ತಸ್ವರೂಪ. ಯಾರು ಧರ್ಮ ಅನುಷ್ಠಾನ ಮಾಡ್ತಾರೋ ಅವರನ್ನು ಕೃಷ್ಣ ಸದಾ ಪಾಲಿಸುತ್ತಿದ್ದ. ಪ್ರಜಾಪ್ರಭುತ್ವ ವ್ಯವಸ್ಥೆಗೆ ನಾಂದಿ ಹಾಡಿದ ಜಗತ್ತಿನ ಮೊದಲ ರಾಜತಾಂತ್ರಿಕ ಆತ ಎಂದರು.
ಭಾರತ ಸಂಸ್ಕೃತಿಯ ತಾಯಿಯಿದ್ದಂತೆ, ನಾವಿಂದು ಆ ಸಂಸ್ಕೃತಿಯ ಉತ್ತಾರಾಧಿಕಾರಿಗಳಾಗಬೇಕಾಗಿದೆ. ಈ ಮಣ್ಣಿನ ಕಣಕಣದಲ್ಲಿ ಕೃಷ್ಣ ಪ್ರಜ್ಞೆ ಅಡಗಿದೆ. ಇದಕ್ಕೆ ಉದಾಹರಣೆ ಎಂಬಂತೆ ನಾಯಕತ್ವ ಗುಣದಿಂದ ಮೇರುವ್ಯಕ್ತಿತ್ವ ನಿರ್ಮಾಣ ಮಾಡಿಕೊಂಡಿರುವ ಡಾ.ಡಿ.ವೀರೇಂದ್ರ ಹೆಗ್ಗಡೆ ಹಾಗೂ ಡಾ.ಮೋಹನ್ ಆಳ್ವರಂತವರು ದೊಡ್ಡ ನಿದರ್ಶನವಾಗಿ ನಿಲ್ಲುತ್ತಾರೆ ಎಂದರು.
ಕಾರ‍್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಆಳ್ವಾಸ್ ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ಉಪನ್ಯಾಸಕ ವೃತ್ತಿ ಅತ್ಯಂತ ಶ್ರೇಷ್ಠ ಎಂದು ಪರಿಗಣಿತವಾದರೂ, ಅಶೋಕ್ ಭಟ್‌ರಂತಹ ಪ್ರವಚನಕಾರರು ತಮ್ಮ ವಾಕ್ಚಾತುರ‍್ಯದ ಮೂಲಕ ಇಡೀ ಸಮಾಜಕ್ಕೆ ಪ್ರೇರಣೆಯಾಗಬಲ್ಲರು. ಭಾರತದಲ್ಲಿ ಹುಟ್ಟಿದ ನಾವೆಲ್ಲರೂ ಪುಣ್ಯವಂತರು ಎಂದು ನುಡಿದರು.
ಕಾರ‍್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಇದ್ದರು.
ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ.ವಿನಾಯಕ ಭಟ್ಟ ಪ್ರಸ್ತಾವಿಕ ಮಾತುಗಳನ್ನಾಡಿದರು. ವಿದ್ವಾನ ಲಕ್ಷೀಶ ಭಟ್ಟ ನಿರೂಪಿಸಿ, ಕೆ ಅಪರ್ಣ ಹೊಳ್ಳ ವಂದಿಸಿದರು.