ಪೋಷಕರು ಮಕ್ಕಳಿಗೆ ಪಲ್ಸ್ ಪೊಲೀಯೋ ಲಸಿಕೆಯನ್ನು ಹಾಕಿಸಲು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಕರೆ.

ಉಡುಪಿ: ಮಾರ್ಚ್ 3 ರಂದು ಸಮೀಪದ ಪಲ್ಸ್ ಪೊಲಿಯೋ ಲಸಿಕಾ ಕೇಂದ್ರಗಳೀಗೆ ಪೋಷಕರು ತಮ್ಮ 5 ವರ್ಷದೊಳಗಿನ ಮಕ್ಕಳನ್ನು ಕರೆದೊಯ್ದು ಪೊಲಿಯೋ ಲಸಿಕೆಯನ್ನು ಹಾಕಿಸಬೇಕೆಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಕರೆ ನೀಡಿದರು.
   
ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಪಲ್ಸ್ ಪೊಲೀಯೋ ಕಾರ್ಯಕ್ರಮದ ಜಿಲ್ಲಾ ಲಸಿಕಾ ಕಾರ್ಯಪಡೆ ಸಮನ್ವಯ ಸಮಿತಿ ಹಾಗೂ ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮದ ಜಿಲ್ಲಾ ಸಮನ್ವಯ ಸಮಿತಿ ಸಭೆಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
   
ರಾಷ್ಟ್ರೀಯ ಪಲ್ಸ್ ಪೊಲೀಯೋ ಕಾರ್ಯಕ್ರಮದಡಿಯಲ್ಲಿ ಮಾರ್ಚ್ 3 ರ ಭಾನುವಾರ 5 ವರ್ಷದೊಳಗಿನ ಮಕ್ಕಳಿಗೆ ಜಿಲ್ಲೆಯ 660 ಲಸಿಕಾ ಕೇಂದ್ರಗಳಲ್ಲಿ ಪೊಲೀಯೋ ಹನಿಗಳನ್ನು ಹಾಕಲಾಗುವುದು. ಯಾವುದೇ ಮಕ್ಕಳು ಪಲ್ಸ್ ಪೊಲೀಯೋ ಲಸಿಕೆಯಿಂದ ತಪ್ಪಿ ಹೋಗದಂತೆ ನೋಡಿಕೊಳ್ಳಬೇಕು ಎಂದರು.
   
ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿ 53,601 ಹಾಗೂ ನಗರ ಪ್ರದೇಶಗಳಲ್ಲಿ 13,191 ಒಟ್ಟಾರೆ 66,852 ಐದು ವರ್ಷದೊಳಗಿನ ಮಕ್ಕಳನ್ನು ಈಗಾಗಲೇ ಗುರುತಿಸಲಾಗಿದೆ. ಇವರುಗಳಿಗೆ ಲಸಿಕೆಗಳನ್ನು ನೀಡಲು ಗ್ರಾಮೀಣ ಪ್ರದೇಶದಲ್ಲಿ 568, ನಗರ ಪ್ರದೇಶಗಳಲ್ಲಿ 92 ಒಟ್ಟು 660 ಲಸಿಕಾ ಕೇಂದ್ರಗಳನ್ನು ತೆರೆಯಲಾಗುವುದು. ಇವುಗಳ ಜೊತೆಯಲ್ಲಿ ಟ್ರಾನ್ಸಿಟ್ 31 ಬೂತುಗಳು, 6 ಮೊಬೈಲ್ ಟೀಮ್‌ಗಳಿದ್ದು, 2788 ಸಿಬ್ಬಂದಿಗಳು ಹಾಗೂ 144 ಮೇಲ್ವಿಚಾರಕರುಗಳನ್ನು ನೇಮಿಸಲಾಗಿದೆ ಎಂದರು.
   
ಪಲ್ಸ್ ಪೊಲೀಯೋ ಲಸಿಕಾ ಕಾರ್ಯಕ್ರಮದ ಬಗ್ಗೆ ಜನಸಾಮಾನ್ಯರಿಗೆ ಹೆಚ್ಚಿನ ಪ್ರಚಾರ ಕೈಗೊಳ್ಳಬೇಕು. ಶಾಲೆಗಳಲ್ಲಿ ವಿದ್ಯಾರ್ಥಿಗಳ ಮೂಲಕ ಪೋಷಕರಿಗೆ ಪಲ್ಸ್ ಪೊಲೀಯೋ ಹಾಕಿಸುವ ಬಗ್ಗೆ ಮಾಹಿತಿ ನೀಡಬೇಕೆಂದರು.
   
ರಾಜ್ಯದಿಂದ 94,900 ಡೋಸ್‌ನಷ್ಟು ಪೊಲೀಯೋ ಲಸಿಕೆ ನೀಡಿದ್ದು, ಮಾರ್ಗಸೂಚಿಯನ್ವಯ ಲಸಿಕೆಯನ್ನು ಸುರಕ್ಷಿತವಾಗಿ ದಾಸ್ತಾನು ಇಟ್ಟುಕೊಳ್ಳಬೇಕು. ಅವುಗಳ ವಿತರಣೆಯೂ ಸಹ ಸುರಕ್ಷಿತವಾಗಿ ನಿರ್ವಹಿಸಬೇಕು ಎಂದು ತಿಳಿಸಿದರು.
     
ವಲಸೆ, ಕಟ್ಟಡ ಹಾಗೂ ಮತ್ತಿತರ ಕೂಲಿ ಕಾರ್ಮಿಕರ ಮಕ್ಕಳು ಲಸಿಕೆ ಪಡೆಯುವುದರಿಂದ ಹೊರಗೆ ಉಳಿಯದಂತೆ ನೋಡಿಕೊಳ್ಳಬೇಕು. ಪಲ್ಸ್ ಪೊಲೀಯೋ ಕಾರ್ಯಕ್ರಮದ ಯಶಸ್ವಿಗೆ ಎಲ್ಲಾ ಇಲಾಖೆಗಳು ಸಮನ್ವಯದೊಂದಿಗೆ ಕಾರ್ಯನಿರ್ವಹಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದರು.
    
ಮಣ್ಣಿನ ಮೂಲಕ ಮಕ್ಕಳಲ್ಲಿ ಹರಡಲ್ಪುಡುವ ಜಂತುಹುಳು ಸೋಂಕನ್ನು ತಡೆಗಟ್ಟಲು 1-19 ವರ್ಷದೊಳಗಿನ ಮಕ್ಕಳಿಗೆ ಶಾಲಾ, ಕಾಲೇಜು ಹಾಗೂ ಅಂಗನವಾಡಿಗಳಲ್ಲಿ ಅಲ್ಬೆಂಡಾಜೋಲ್ ಮಾತ್ರೆಗಳನ್ನು ವಿತರಿಸಲಾಗುವುದು ಎಂದರು.
   
ಜಂತುಹುಳುಗಳು ದೇಹದ ಪೌಷ್ಠಿಕಾಂಶಗಳನ್ನು ಬೆಳೆಸಲು ಅಡ್ಡಿಪಡಿಸುವ ಕಾರಣ ರಕ್ತಹೀನತೆ, ಅಪೌಷ್ಠಿಕತೆ, ದುರ್ಬಲ ಮಾನಸಿಕ ದೈಹಿಕ ಬೆಳವಣಿಗೆ, ಉಂಟಾಗುವುದರ ಜೊತೆಗೆ ಮಕ್ಕಳು ದಣಿಯುತ್ತಾರೆ. ಇದರ ನಿರ್ಮೂಲನೆಗೆ ಉಚಿತವಾಗಿ ಮಾತ್ರೆಗಳನ್ನು ವಿತರಿಸಲಾಗುತ್ತಿದೆ. ಪ್ರತಿಯೊಬ್ಬ ವಿದ್ಯಾರ್ಥಿಗಳು ತಪ್ಪದೇ ಪಡೆಯಬೇಕು ಎಂದರು.
    
ಸಭೆಯಲ್ಲಿ ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಚಿದಾನಂದ ಸಂಜು, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ. ಜೋಶ್ನಾ ಬಿ.ಕೆ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಗಣಪತಿ, ಮಹಿಳಾ ಮತ್ತು ಮಕ್ಕಳ ಅಭೀವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ರಾಮರಾವ್, ಪೌರಾಯುಕ್ತ ರಾಯಪ್ಪ, ವಿವಿಧ ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.