ಪೆರ್ಡೂರು ಪಿಡಿಓ ವರ್ಗಾವಣೆಗೆ ಬಿಜೆಪಿ ಬೆಂಬಲಿತ ಸದಸ್ಯರ ಒತ್ತಡ: ಸುದ್ದಿಗೋಷ್ಠಿಯಲ್ಲಿ ಪೆರ್ಡೂರು ಗ್ರಾಪಂ ಸದಸ್ಯ ಸಂತೋಷ ಕುಲಾಲ್ ಆರೋಪ.

ಉಡುಪಿ: ಪೆರ್ಡೂರು ಗ್ರಾಪಂ ಪಿಡಿಓ ಸುಮನಾ ಅವರು ಭ್ರಷ್ಟಾಚಾರ, ಕಾನೂನು ಬಾಹಿರ ವ್ಯವಹಾರಗಳಿಗೆ ಸಹಕಾರ ನೀಡುತ್ತಿಲ್ಲ ಎಂಬ ಕಾರಣಕ್ಕೆ ವರ್ಗಾವಣೆ ಮಾಡಲು ಒತ್ತಡ ತರಲಾಗುತ್ತಿದೆ. ಬೆದರಿಕೆ ಹಾಕಿ ಅವರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಪೆರ್ಡೂರು ಗ್ರಾಪಂ ಸದಸ್ಯ ಸಂತೋಷ ಕುಲಾಲ್ ಪಕ್ಕಾಲು ಆರೋಪಿಸಿದರು.


ಉಡುಪಿಯ ಡಯಾನ ಹೊಟೇಲ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ‌ ಮಾತನಾಡಿದ ಅವರು, ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಭ್ರಷ್ಟಾಚಾರ, ಕಾನೂನು ಬಾಹಿರ ವ್ಯವಹಾರಗಳಿಗೆ ಸಹಕಾರ ನೀಡಲಿಲ್ಲ ಎಂಬ ಕಾರಣಕ್ಕೆ ಮೂರೇ ತಿಂಗಳಲ್ಲಿ ಮೂರು ಮಂದಿ ಪಿಡಿಓಗಳನ್ನು ವರ್ಗಾವಣೆ ಮಾಡಲಾಗಿತ್ತು. ಸುಮನಾ ಅವರು ಪಿಡಿಓ ಅಧಿಕಾರ ವಹಿಸಿಕೊಂಡ ಬಳಿಕ ಭ್ರಷ್ಟಾಚಾರ, ಕಾನೂನು ಬಾಹಿರ ವ್ಯವಹಾರಗಳಿಗೆ ಸಂಪೂರ್ಣ ಕಡಿವಾಣ ಹಾಕಿದ್ದಾರೆ. ಇದನ್ನು ಬಿಜೆಪಿ ಬೆಂಬಲಿತ ಸದಸ್ಯರಿಗೆ ಹಾಗೂ ಕಾರ್ಯಕರ್ತರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಈ ಕಾರಣಕ್ಕಾಗಿ ಶಾಸಕರ ಮೂಲಕ‌ ಸುಮನಾ ಅವರನ್ನು ವರ್ಗಾವಣೆ ಮಾಡಲು ಸಂಚು ರೂಪಿಸಲಾಗುತ್ತಿದೆ ಎಂದು ದೂರಿದರು.


ಪಂಚಾಯತ್ ನಲ್ಲಿ ಜನರ ಕೆಲಸ ಆಗುತ್ತಿಲ್ಲ ಎಂಬುವುದು ಸುಳ್ಳು. ಚುನಾವಣಾ ನೀತಿ ಸಂಹಿತೆ ಇದ್ದ ಕಾರಣ ಕೆಲವೊಂದು ಕೆಲಸಗಳು ಬಾಕಿ ಉಳಿದಿವೆ ಬಿಟ್ಟರೆ, ಉಳಿದೆಲ್ಲ ಕಾರ್ಯಗಳು ಉತ್ತಮ ರೀತಿಯಲ್ಲಿ ನಡೆದುಕೊಂಡು ಹೋಗುತ್ತಿದೆ. ಆದರೆ, ಬಿಜೆಪಿ ಬೆಂಬಲಿತ ಸದಸ್ಯರು ವಿನಾಕಾರಣ ಪಿಡಿಓ‌ ಮೇಲೆ ಸುಳ್ಳು ಆರೋಪಗಳನ್ನು ಹೊರೆಸುತ್ತಿದ್ದಾರೆ. ಇದೇ ರೀತಿ ಪಿಡಿಓ ಮೇಲೆ ಒತ್ತಡ ತರುವುದು, ಅವರನ್ನು ಟಾರ್ಗೆಟ್ ಮಾಡುವ ಕೆಲಸ ಮಾಡಿದರೆ ನಾವು ಕೂಡ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.


ಕಳೆದ ಒಂದು ದಶಕದಿಂದ ಪಂಚಾಯತ್ ನಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದ್ದು, ಯಾವುದೇ ಅಭಿವೃದ್ಧಿ ಪರ ಕೆಲಸ ಆಗುತ್ತಿಲ್ಲ. ಇದರಿಂದ ಬೇಸತ್ತ ಜನರು ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸ್ಪಷ್ಟ ಜನಾದೇಶ ನೀಡಿದ್ದರು. ಆದರೆ, ಬಿಜೆಪಿ ವಾಮ ಮಾರ್ಗದ ಮೂಲಕ ಕುದುರೆ ವ್ಯಾಪಾರ ನಡೆಸಿ ಆಡಳಿತ ಚುಕ್ಕಾಣಿ ಹಿಡಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪೆರ್ಡೂರು ಗ್ರಾಮ ಪಂಚಾಯತಿಯಲ್ಲಿ ಖಾಯಂ ಅಕೌಂಟೆಂಟ್, ಕಾರ್ಯದರ್ಶಿ ಇಲ್ಲ. ತೆರಿಗೆ ವಸೂಲಿಗಾರರೂ ಇಲ್ಲ. ಶಾಸಕರು ಪಿಡಿಓ ಮೇಲೆ ದರ್ಷ ತೋರುವ ಬದಲು, ಖಾಲಿ ಹುದ್ದೆ ಭರ್ತಿ ಮಾಡುವ ಕೆಲಸ ಮಾಡಲಿ ಎಂದು ಕುಟುಕಿದರು.