ಉಡುಪಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಹಾಗೂ ಮರಾಟಿ ಯುವ ಸಾಂಸ್ಕೃತಿಕ ಕಲಾ ಮತ್ತು ಕ್ರೀಡಾ ಸಂಘ (ರಿ) ಪೆರ್ಡೂರು ಇವರ ಸಹಯೋಗದೊಂದಿಗೆ ಗಿರಿಜನ ಉತ್ಸವ – ಸಾಂಸ್ಕೃತಿಕ ಕಾರ್ಯಕ್ರಮವು ಡಿಸೆಂಬರ್ 24 ರಂದು ಬೆಳಗ್ಗೆ 9.30 ಕ್ಕೆ ಪೆರ್ಡೂರಿನ ಸುಬ್ರಾಯ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ.
ಕಾರ್ಯಕ್ರಮವನ್ನು ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಉದ್ಘಾಟಿಸಲಿದ್ದು, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ.
ಪೆರ್ಡೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಚೇತನಾ ಶೆಟ್ಟಿ, ಮರಾಟಿ ಸಮಾಜ ಸೇವಾ ಸಂಘದ ಜಿಲ್ಲಾ ಅಧ್ಯಕ್ಷ ಉಮೇಶ್ ಎ ನಾಯ್ಕ್ ಚೆರ್ಕಾಡಿ, ಕೊರಗ ಸಂಘದ ಜಿಲ್ಲಾ ಅಧ್ಯಕ್ಷೆ ಗೌರಿ, ಶ್ರೀಧರ ಗೌಡ ಮತ್ತು ರವಿ ನಾಯ್ಕ್ ಹರಿಖಂಡಿಗೆ ಹಾಗೂ ಮತ್ತಿತರರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಸುಗಮ ಸಂಗೀತ, ಪಟ ಕುಣಿತ, ಡೋಲು ಮತ್ತು ಕೊಳಲು ವಾದನ, ಕೊರಗರ ಮಹಿಳಾ ಸಾಂಸ್ಕೃತಿಕ ವೈಭವ, ಚಿಲಿಪಿಲಿ ಗೊಂಬೆ, ಪುಣ್ಯಕೋಟಿ ನೃತ್ಯ ರೂಪಕ, ಹೋಳಿ ಕುಣಿತ, ಕುಣಿತ ಭಜನೆ, ಯಕ್ಷಗಾನ ವೈಭವ, ಕರಗ ಕೋಲಾಟ, ಚಂಡೆವಾದನ, ಬೇಡರ ಕುಣಿತ ಸೇರಿದಂತೆ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.