ಪಶ್ಚಿಮ ಬಂಗಾಳದ ಸಂದೇಶ್‌ಖಾಲಿಯಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ: ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ ಕಲ್ಕತ್ತಾ ಹೈಕೋರ್ಟ್

ಕೋಲ್ಕತ್ತಾ: ಪಶ್ಚಿಮ ಬಂಗಾಳದ 24 ಪರಗಣ ಜಿಲ್ಲೆಯ ಸಂದೇಶ್‌ಖಾಲಿ ಗ್ರಾಮದಲ್ಲಿ ಬಂದೂಕು ತೋರಿಸಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿರುವ ಮತ್ತು ಬುಡಕಟ್ಟು ಜನಾಂಗದವರ ಭೂಮಿಯನ್ನು ಗ್ರಾಮಸ್ಥರಿಂದ ಬಲವಂತವಾಗಿ ಕಸಿದುಕೊಳ್ಳಲಾಗುತ್ತಿರುವ್ ಆರೋಪದ ವರದಿಗಳನ್ನು ಗಂಭೀರವಾಗಿ ಪರಿಗಣಿಸಿರುವ ಕಲ್ಕತ್ತಾ ಹೈಕೋರ್ಟ್ ಮಂಗಳವಾರ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದೆ.

ಪ.ಬಂಗಾಳದ ಸಂದೇಶಖಾಲಿಯಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳೆಯರ ಮೇಲೆ ಬಂದೂಕು ತೋರಿಸಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುವ ಸುದ್ದಿ ವರದಿಗಳನ್ನು ಪರಿಶೀಲಿಸಿದ ನಂತರ “ತೀವ್ರವಾಗಿ ನಿರಾಶೆಗೊಂಡಿರುವುದಾಗಿ” ನ್ಯಾಯಮೂರ್ತಿ ಅಪೂರ್ವ ಸಿನ್ಹಾ ರೇ ಹೇಳಿದ್ದಾರೆ.

ನ್ಯಾಯಾಲಯವು ನ್ಯಾಯವಾದಿ ಜಯಂತ ನಾರಾಯಣ ಚಟ್ಟೋಪಾಧ್ಯಾಯ ಅವರನ್ನು ಅಮಿಕಸ್ ಕ್ಯೂರಿಯಾಗಿ ನ್ಯಾಯಾಲಯಕ್ಕೆ ಸಹಾಯ ಮಾಡಲು ನೇಮಿಸಿದೆ ಮತ್ತು ಮುಂದಿನ ವಿಚಾರಣೆಯನ್ನು ಫೆಬ್ರವರಿ 20 ಕ್ಕೆ ಮುಂದೂಡಿದೆ.

ವರದಿಗಳ ಪ್ರಕಾರ, ಕನಿಷ್ಠ ಮೂವರು ತೃಣಮೂಲ ಕಾಂಗ್ರೆಸ್ ಪಕ್ಷದ (ಟಿಎಂಸಿ) ನಾಯಕರಾದ ಶೇಖ್ ಶಾಜಹಾನ್, ಶಿಬಾ ಪ್ರಸಾದ್ ಹಜ್ರಾ ಮತ್ತು ಉತ್ತಮ್ ಸರ್ದಾರ್ ಅವರು ಭೂಕಬಳಿಕೆ ಚಟುವಟಿಕೆಗಳಲ್ಲಿ ಮತ್ತು ಸಂದೇಶಖಾಲಿ ಗ್ರಾಮಸ್ಥರ ಚಿತ್ರಹಿಂಸೆಯಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಆರೋಪಗಳು ಮಂಗಳವಾರ ಹೈಕೋರ್ಟ್‌ನ ಮತ್ತೊಬ್ಬ ನ್ಯಾಯಾಧೀಶ ನ್ಯಾಯಮೂರ್ತಿ ಜೇ ಸೇನ್‌ಗುಪ್ತಾ ಅವರ ಗಮನಕ್ಕೆ ಬಂದಿದೆ. ಸಂದೇಶಕಾಲಿಯಲ್ಲಿ ಜನರ ಸಂಚಾರವನ್ನು ನಿರ್ಬಂಧಿಸಿದ ಅಪರಾಧ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್ 144 ರ ಅಡಿಯಲ್ಲಿ ಜಿಲ್ಲಾಡಳಿತ ಹೊರಡಿಸಿದ ಆದೇಶವನ್ನು ಮಂಗಳವಾರ ರದ್ದುಗೊಳಿಸುವ ಸಂದರ್ಭ ಈ ವಿಚಾರ ಬೆಳಕಿಗೆ ಬಂದಿದೆ.