ಪರಿಸರ ಮಾಲಿನ್ಯವಾದರೆ ಸೂಕ್ತ ಕಾನೂನು ಕ್ರಮ: ನಂದಿಕೂರು ಎಂ11 ಕಂಪನಿಗೆ ಜಿಲ್ಲಾಧಿಕಾರಿ ಖಡಕ್ ಎಚ್ಚರಿಕೆ

ಉಡುಪಿ: ಪರಿಸರ ಅಧಿಕಾರಿಗಳ ಪರೀಕ್ಷಾ ವರದಿಗನುಗುಣವಾಗಿ ಅವರ ಸೂಚನೆಯನ್ನು ಕಂಪನಿ ಪಾಲಿಸಬೇಕು.‌ ತಪ್ಪಿದ್ದಲ್ಲಿ ಕಂಪನಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಅವರು, ನಂದಿಕೂರಿನಲ್ಲಿ ಕಾರ್ಯಚರಿಸುತ್ತಿರುವ ಎಂ.11 ಕಂಪನಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಸಾರ್ವಜನಿಕರ ದೂರಿನನ್ವಯ ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಸಹಿತ ಸರ್ಕಾರಿ ಅಧಿಕಾರಿಗಳು ಹಾಗೂ ಸಾರ್ವಜನಿಕರನ್ನು ಸೇರಿಸಿಕೊಂಡು ಎಂ11 ಕಂಪನಿಯೊಳಗೆ ಪರೀಶಿಲನೆ ನಡೆಸಿ ಬಳಿಕ ಕಂಪನಿಯ ಹಾಲ್ ವೊಂದರಲ್ಲಿ ತುರ್ತು ಸಭೆ ನಡೆಸಿ ಮಾತನಾಡಿದರು. ಅಡುಗೆ ಎಣ್ಣೆಯನ್ನು ಮರು ಬಳಕೆ ಮಾಡಿ ಬಯೋ ಡಿಸೇಲ್ ಉತ್ಪಾದಿಸುವ ಎಂ11 ಹೆಸರಿನ ಕಂಪನಿಯೊಂದು ನಂದಿಕೂರಿನಲ್ಲಿ ಆರಂಭಗೊಂಡಿದ್ದು, ಜೈವಿಕ ಇಂಧನಕ್ಕೆ ಸರ್ಕಾರ ಭಾರೀ ಪ್ರೋತ್ಸಾಹ ನೀಡುತ್ತಿದೆ. ಪೆಟ್ರೋಲಿಯಂ ಡಿಸೇಲ್ ನಿಂದಾಗಿ ಕಾರ್ಬನ್ ಡೈಆಕ್ಸೈಡ್ ಉತ್ಪಾದನೆಯಾಗಿ ಓಜೋನ್ ಪದರಕ್ಕೆ ಹಾನಿಯಾಗುತ್ತಿದೆ. ಸರ್ಕಾರದ ಅನುಮತಿ ಪಡೆದು ಕಂಪನಿ ಆರಂಭಿಸಲಾಗಿದೆ ಯಾದರೂ, ಪರಿಸರಕ್ಕೆ ಹಾನಿಯಾಗುವ ರೀತಿಯಲ್ಲಿ ಕಾರ್ಯಚರಿಸುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿದೆ. ಆ ನಿಟ್ಟಿನಲ್ಲಿ ನುರಿತ ಪರಿಸರ ತಜ್ಞರ ಮೂಲಕ ಪರಿಶೀಲನೆ ನಡೆಸಿ ಅವರ ಸೂಚನೆಯಂತೆ ಕಂಪನಿ ತನ್ನ ತಪ್ಪುಗಳನ್ನು ಸರಿ ಪಡಿಸಿಕೊಳ್ಳಬೇಕಾಗಿದೆ. ಒಂದು ಪರ್ಸೆಂಟ್ ಕೂಡಾ ಪರಿಸರಕ್ಕೆ ಹಾನಿಯಾದರೂ ಕಂಪನಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಅನಿವಾರ್ಯವಾಗಲಿದೆ ಎಂದರು.

ಈ ಬಗ್ಗೆ ಕಂಪನಿಯ ಮುಖ್ಯಸ್ಥರ ಗಮನಕ್ಕೆ ತರಲಾಗಿದ್ದು ಎಲ್ಲವನ್ನೂ ನಿಭಾಯಿಸುವ ಭರವಸೆ ನೀಡಿದ್ದಾರೆ. ಯಾವುದೇ ಕಾರಣಕ್ಕೆ ಪರಿಸರ ತಜ್ಞರ ಸೂಚನೆಯನ್ನು ಕಡೆಗಣಿಸಿದ್ದಂತೆ ಎಚ್ಚರಿಸಲಾಗಿದೆ ಎಂದು ತಿಳಿಸಿದರು.

ಸ್ಥಳೀಯರ ಉದ್ಯೋಗ ಅವಕಾಶವನ್ನು ಕಸಿದುಕೊಳ್ಳುವಂತ್ತಿಲ್ಲ ಇದರಲ್ಲೂ ಸರ್ಕಾರದ ಸೂಚನೆಯನ್ನು ಪಾಲಿಸುವಂತೆ ಜಿಲ್ಲಾಧಿಕಾರಿಗಳು ಎಚ್ಚರಿಸಿದ್ದಾರೆ.ಈ ಸಂದರ್ಭ ಪಲಿಮಾರು ಗ್ರಾ.ಪಂ.ಅಧ್ಯಕ್ಷೆ ಸೌಮ್ಯಲತಾ ಶೆಟ್ಟಿ, ಉಪಾಧ್ಯಕ್ಷ ರಾಯೇಶ್ವರ ಪೈ, ಹಿತರಕ್ಷಣಾ ಸಮಿತಿ ಅಧ್ಯಕ್ಷ ದಿನೇಶ್ ಕೋಟ್ಯಾನ್, ಪ್ರಮುಖರಾದ ನಾಗೇಶ್ ರಾವ್, ಲಕ್ಷ್ಮಣ್ ಶೆಟ್ಟಿ, ಪ್ರತೀಕ್ ಕೋಟ್ಯಾನ್, ಪ್ರಕಾಶ್ ಶೆಟ್ಟಿ, ಶಶಿಕಾಂತ್ ಪಡುಬಿದ್ರಿ, ಕಾಪು ತಹಶಿಲ್ದಾರ್ ಸಹಿತ ವಿವಿಧ ಇಲಾಖಾ ಅಧಿಕಾರಿಗಳು ಇದ್ದರು.