ಪಡುಬಿದ್ರಿ: ಯಕ್ಷಗಾನ ಕಲಾವಿದನಿಗೆ ಮನೆಯಲ್ಲಿ ಕೂಡಿ ಹಾಕಿ ಹಲ್ಲೆ: ಪ್ರಕರಣ ದಾಖಲು.

ಉಡುಪಿ: ಹಣದ ವ್ಯವಹಾರಕ್ಕೆ ಸಂಬಧಿಸಿ ಯಕ್ಷಗಾನ ಕಲಾವಿದರೊಬ್ಬರನ್ನು ಮನೆಯಲ್ಲಿ ಕೂಡಿ ಹಾಕಿ ಹಲ್ಲೆ ನಡೆಸಿರುವ ಬಗ್ಗೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಡುಬಿದ್ರಿ ನಡ್ಸಾಲು ಗ್ರಾಮದ ನಿತಿನ್ ಆಚಾರ್ಯ(31) ಹಲ್ಲೆಗೆ ಒಳಗಾಗಿರುವ ಕಲಾವಿದ. ಸಸಿಹಿತ್ಲು ಶ್ರೀಭಗವತಿ ಯಕ್ಣಗಾನ ಮೇಳದ ಕಲಾವಿದರಾಗಿರುವ ಇವರು, ಅವರ ಸ್ನೇಹಿತ ಪಾವಂಜೆ ಮೇಳದ ಕಲಾವಿದ ಸಚಿನ್‌ನಿಂದ 2020ರಲ್ಲಿ ಬಡ್ಡಿಗೆ ಸಾಲ ಪಡೆದುಕೊಂಡು ಅಸಲು ಹಾಗೂ ಬಡ್ಡಿಕಟ್ಟುತ್ತಿದ್ದರು.

ನಿಗದಿತ ಸಮಯದೊಳಗೆ ಸಾಲವನ್ನು ಕಟ್ಟುತ್ತಿಲ್ಲ ಎಂಬ ಕಾರಣದಿಂದ ಸಚಿನ್, ಆತನ ಉದ್ಯಾವರದಲ್ಲಿರುವ ಮನೆಗೆ ಜ.21ರಂದು ಕರೆದುಕೊಂಡು ಹೋಗಿ, ಅಲ್ಲಿ ಮನೆಯಲ್ಲಿ ಬಲಾತ್ಕಾರವಾಗಿ ಕೂಡಿ ಹಾಕಿದರು. ಅಲ್ಲಿ ಸಚಿನ್, ಆತನ ತಂದೆ ಕುಶಾಲ್ ಹಾಗೂ ಇನ್ನೊರ್ವ ಅಪರಿಚಿತ ವ್ಯಕ್ತಿ ಕಂಬಳದ ಕೋಣಗಳಿಗೆ ಹೊಡೆಯುವ ಬೆತ್ತದಿಂದ ಬೆನ್ನಿಗೆ, ತಲೆಗೆ, ಕಾಲಿಗೆ ಹೊಡೆ ದರಲ್ಲದೆ, ಕಾಲಿನಿಂದ ತುಳಿದು ಕೈಯಿಂದ ಕೆನ್ನೆಗೆ ಹೊಡೆದು ಖಾಲಿ ಬಾಂಡ್ ಪೆಪರ್‌ಗೆ ಬಲಾತ್ಕಾರವಾಗಿ ಸಹಿ ಪಡೆದುಕೊಂಡರೆಂದು ದೂರಲಾಗಿದೆ.

ಹಲ್ಲೆಗೊಳಗಾದ ನಿತಿನ್ ಅದೇ ರಾತ್ರಿ ಪುತ್ತೂರಿನಲ್ಲಿ ನಡೆದ ಯಕ್ಷಗಾನದಲ್ಲಿ ಪಾಲ್ಗೊಂಡಿದ್ದು, ಜ.22ರಂದು ಬೆಳಿಗ್ಗೆ ನೋವು ಜಾಸ್ತಿಯಾದ್ದರಿಂದ ಪಡುಬಿದ್ರೆ ಖಾಸಗಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.