ನ.17, 18 ರಂದು ಉಡುಪಿ ನ್ಯಾಯಾಲಯ ಮತ್ತು ವಕೀಲರ ಸಂಘದ ಶತಮಾನೋತ್ತರ ರಜತ ಸಂಭ್ರಮ

ಉಡುಪಿ: ಉಡುಪಿ ನ್ಯಾಯಾಲಯ ಮತ್ತು ವಕೀಲರ ಸಂಘಕ್ಕೆ 125 ವರ್ಷ ತುಂಬಿದ್ದು, ಈ ಹಿನ್ನಲೆಯಲ್ಲಿ ಇದೇ ನವೆಂಬರ್ 17 ಮತ್ತು 18 ರಂದು ಉಡುಪಿ ನ್ಯಾಯಾಲಯದ ಆವರಣದಲ್ಲಿ 2 ದಿನಗಳ ಕಾಲ ಶತಮಾನೋತ್ತರ ರಜತ ಸಂಭ್ರಮವನ್ನು ಆಚರಿಸಲು ಉಡುಪಿ ವಕೀಲರ ಸಂಘ ನಿರ್ಧರಿಸಿದೆ.

ಈ ಬಗ್ಗೆ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಶತಮಾನೋತ್ತರ ರಜತ ಮಹೋತ್ಸವ ಸಮಿತಿಯ ಅಧ್ಯಕ್ಷ ಮಟ್ಟಾರ್ ರತ್ನಾಕರ್ ಹೆಗ್ಡೆ ಮಾಹಿತಿ ನೀಡಿದರು. ಉಡುಪಿಯ ಮೊದಲ ನ್ಯಾಯಾಲಯ ಬಾರೂಕೂರಿನಲ್ಲಿ 1899 ರಲ್ಲಿ ಸ್ಥಾಪನೆಯಾಗಿತ್ತು. ಆಗ ಅದನ್ನು ಉಡುಪಿ ಮುನ್ಸಿಫ್ ಕೋರ್ಟ್ ಎಂದು ಕರೆಯಲಾಗುತ್ತಿತ್ತು. ಈಗ 125 ವರ್ಷ ತುಂಬಿದ ಸಂಭ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲು ಸಕಲ ಸಿದ್ದತೆಯನ್ನು ಮಾಡಲಾಗಿದೆ ಎಂದರು.

ನ.17ರಂದು ಬೆಳಿಗ್ಗೆ 9.30 ಕ್ಕೆ ನಗರದ ಜೋಡುಕಟ್ಟೆಯಿಂದ ಅತಿಥಿಗಳನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಂಡು, ಮೆರವಣಿಗೆ ಮೂಲಕ ಜಿಲ್ಲಾ ನ್ಯಾಯಾಲಯವನ್ನು ತಲುಪುತ್ತೇವೆ. ಬೆಳಿಗ್ಗೆ 10 ಗಂಟೆಗೆ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಅರವಿಂದ್ ಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕರ್ನಾಟಕ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಆಂಧ್ರಪ್ರದೇಶದ ರಾಜ್ಯಪಾಲ, ಸುಪ್ರೀಂಕೋರ್ಟ್ ನ ವಿಶ್ರಾಂತ ನ್ಯಾಯಧೀಶ ಅಬ್ದುಲ್ ನಝೀರ್, ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಎಂ.ಜಿ.ಉಮಾ, ರಾಮಚಂದ್ರ.ಡಿ.ಹುದ್ದಾರ್, ವೆಂಕಟೇಶ್ ನಾಯ್ಕ್, ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಉಚ್ಚ ನ್ಯಾಯಾಲಯದ ರಿಜಿಸ್ಟ್ರಾರ್ ಜನರಲ್ ಕೆ.ಎಸ್.ಭರತ್ ಕುಮಾರ್, ಉಡುಪಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಧೀಶ ಕಿರಣ್. ಎಸ್.ಗಂಗಣ್ಣನವರ್ ಭಾಗವಹಿಸಿದ್ದಾರೆ ಎಂದು ತಿಳಿಸಿದರು.

ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ಉಡುಪಿ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಇ.ಎಸ್.ಇಂದಿರೇಶ್ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ.

ನ.18 ರಂದು ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಹಾಗು ಉಡುಪಿ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಇ.ಎಸ್.ಇಂದಿರೇಶ್ ಸಮಾರೋಪ ಭಾಷಣ ಮಾಡಲಿದ್ದಾರೆ. ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಎಸ್.ವಿಶ್ವಜಿತ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಉಚ್ಚ ನ್ಯಾಯಾಲಯದ ನ್ಯಾಯಾಮೂರ್ತಿಗಳಾದ ಶಿವಶಂಕರ ಬಿ ಅಮರಣ್ಣವರ್, ಸಿ.ಎಮ್ ಜೋಶಿ, ಟಿ‌.ಜಿ.ಶಿವಶಂಕರೇ ಗೌಡ, ಉಡುಪಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಿರಣ್ .ಎಸ್. ಗಂಗಣ್ಣನವರ್ ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಉಡುಪಿ ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್ ಪ್ರವೀಣ್ ಕುಮಾರ್, ಪ್ರಧಾನ ಕಾರ್ಯದರ್ಶಿ ರಾಜೇಶ್ ಎ.ಆರ್, ಪದಾಧಿಕಾರಿಗಳಾದ ಮಿತ್ರ ಕುಮಾರ್ ಶೆಟ್ಟಿ, ಬೈಲೂರು ರವೀಂದ್ರ ದೇವಾಡಿಗ, ಸಂತೋಷ್ ಕುಮಾರ್ ಮೂಡುಬೆಳ್ಳೆ, ಗಂಗಾಧರ ಹೆಚ್.ಎಮ್, ಆರೂರು ಸುಕೇಶ್ ಶೆಟ್ಟಿ, ಶತಮಾನೋತ್ತರ ರಜತ ಮಹೋತ್ಸವ ಸಮಿತಿಯ ಕಾರ್ಯದರ್ಶಿ ಕೆ.ಆರ್.ರಾಮಚಂದ್ರ ಅಡಿಗ, ಖಜಾಂಚಿ ವಿಲ್ಫ್ರೆಡ್ ಓಸ್ವಾಲ್ಡ್ ಡಿಮೆಲ್ಲೊ, ಸಮಿತಿಯ ಸಂಯೋಜಕರಾದ ಸಂಜೀವ.ಎ, ಎಮ್. ಶಾಂತಾರಾಮ್ ಶೆಟ್ಟಿ, ಎನ್.ಕೆ.ಆಚಾರ್ಯ, ಶಶಿಕಾಂತ್ ಶೆಟ್ಟಿ, ಬಿ.ನಾಗರಾಜ್, ದಿನೇಶ್ ಬಿ ಶೆಟ್ಟಿ, ಆನಂದ ಮಡಿವಾಳ, ಸತೀಶ್ ಪೂಜಾರಿ, ಅಸದುಲ್ಲಾ ಕಟಪಾಡಿ, ಅಮೃತಕಲಾ, ಸ್ಮರಣ ಸಂಚಿಕೆಯ ಸಂಪಾದಕ ಶಶೀಂದ್ರ ಕುಮಾರ್, ಸಹ ಸಂಪಾದಕ ವಿಷ್ಣುಮೂರ್ತಿ ಉಡುಪ ಉಪಸ್ಥಿತರಿದ್ದರು.