ನೇಹಾ ಪೋಷಕರ ಆಗ್ರಹದಂತೆ ಪೊಲೀಸ್ ಇಲಾಖೆ ಎಲ್ಲಾ ಆಯಾಮಗಳಲ್ಲಿಯೂ ತನಿಖೆ ನಡೆಸಬೇಕು: ಕೆ.ಜಯಪ್ರಕಾಶ್ ಹೆಗ್ಡೆ

ಉಡುಪಿ: ಗುರುವಾರ ಹುಬ್ಬಳ್ಳಿಯ ಕಾಲೇಜು ಆವರಣದಲ್ಲಿ ದುಷ್ಕರ್ಮಿಯಿಂದ ಅಮಾನುಷವಾಗಿ ಕೊಲೆಗೀಡಾದ ವಿದ್ಯಾರ್ಥಿನಿ ನೇಹಾ ಸಾವಿಗೆ ಕಂಬನಿ ಮಿಡಿದಿರುವ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ದುಷ್ಕರ್ಮಿಯ ಕೃತ್ಯವನ್ನು ಖಂಡಿಸಿದ್ದಾರೆ.

ಭವಿಷ್ಯದ ಕನಸುಗಳಿಗಾಗಿ ಬಾಳಿ ಬದುಕಬೇಕಾಗಿದ್ದ, ಶಿಕ್ಷಣಾಭ್ಯಾಸ ಮಾಡುತ್ತಿದ್ದ ನೇಹಾ ಹತ್ಯೆ ಮನಸ್ಸಿಗೆ ನೋವು ತಂದಿದೆ. ಆಕೆಯನ್ನು ಅಮಾನುಷವಾಗಿ ಕೊಂದಿರುವ ವಿಕೃತ ಹಾಗೂ ಕ್ರೂರ ಮನಸ್ಥಿತಿಯ ಕೊಲೆಗಾರನ ಕೃತ್ಯವನ್ನು ಸುಸಂಸ್ಕೃತ ನಾಗರಿಕ ಸಮಾಜದ ಯಾರೂ ಒಪ್ಪುವುದಿಲ್ಲ. ಆತನ ಕೃತ್ಯಕ್ಕೆ ಕಾನೂನು ಕ್ರಮದಲ್ಲಿ ಕಠಿಣ ಶಿಕ್ಷೆಯಾಗಬೇಕು. ಮುಂದೆ ಸಮಾಜದಲ್ಲಿ ಇಂತಹ ಘಟನೆಗಳು ಪುನರಾವರ್ತನೆ ಆಗದಂತೆ ಸಂಬಂಧಿಸಿದ ಇಲಾಖೆಗಳು ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.

ನೇಹಾ ಪೋಷಕರ ಆಗ್ರಹದಂತೆ ಪೊಲೀಸ್ ಇಲಾಖೆ ಎಲ್ಲಾ ಆಯಾಮಗಳಲ್ಲಿಯೂ ತನಿಖೆ ನಡೆಸಬೇಕು ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುವ ಜೆ.ಪಿ.ಹೆಗ್ಡೆ, ನೇಹಾ ಹೆತ್ತವರು, ಸ್ನೇಹಿತರು ಹಾಗೂ ಸರ್ವ ನೊಂದ ಮನಸ್ಸುಗಳ ಜೊತೆ ನಾನಿರುವುದಾಗಿ ಹೇಳಿಕೆ ನೀಡಿದರು.