ನನ್ನ ಸ್ಪರ್ಧೆ ಪಕ್ಷ ಅಥವಾ ವ್ಯಕ್ತಿಯ ವಿರುದ್ಧ ಅಲ್ಲ, ಜನ ಪ್ರತಿನಿಧಿಯಾಗಿ ಸೇವೆ ಮಾಡಲು ಮಾತ್ರ.

ಉಡುಪಿ: ಬಿಜೆಪಿಗಾಗಿ ಈ ಹಿಂದೆ ಜಿಲ್ಲಾದ್ಯಂತ ಸಂಚರಿಸಿ ಸಂಘಟಿಸಿದ್ದೇನೆ. ಈಗ ಪಕ್ಷ ಟಿಕೆಟ್ ನಿರಾಕರಿಸಿದೆ. ಆದರೂ ನನ್ನ ಸ್ಪರ್ಧೆ ಪಕ್ಷ ಅಥವಾ ವ್ಯಕ್ತಿಯ ವಿರುದ್ಧ ಅಲ್ಲ ಜನ ಪ್ರತಿನಿಧಿಯಾಗಿ ಸೇವೆ ಮಾಡಲು ಮಾತ್ರ ಎಂದು ಪಕ್ಷೇತರ ಅಭ್ಯರ್ಥಿ ಕೆ. ರಘುಪತಿ ಭಟ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಈ ಚುನಾವಣೆಗೆ ಸ್ಪರ್ಧಿಸದಿದ್ದರೆ ಮುಂದೆ ಚುನಾವಣೆ ರಾಜಕಾರಣದಲ್ಲಿ ಇರಲು ಸಾಧ್ಯವಾಗದು. ಕರಾವಳಿ, ಮಲೆನಾಡು ಭಾಗದಲ್ಲಿ ಪ್ರವಾಸ ಮಾಡಿದ್ದೇನೆ ಮತ್ತು ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ಜಾತಿ, ಮತ, ಧರ್ಮ ಬಿಟ್ಟು ಎಲ್ಲರೂ ನಮ್ಮೊಂದಿಗೆ ಕೈ ಜೋಡಿಸುತ್ತಿದ್ದಾರೆ. ಬಿಜೆಪಿಯ ಅನೇಕರು ನೇರವಾಗಿ ಹಾಗೂ ಅಪಾರ ಸಂಖ್ಯೆಯಲ್ಲಿ ಪರೋಕ್ಷವಾಗಿ ಬೆಂಬಲಿಸುತ್ತಿದ್ದಾರೆ ಎಂದರು.

ಸ್ಪರ್ಧೆ ಮಾಡಿದ ನನ್ನನ್ನು ಉಚ್ಚಾಟನೆ ಮಾಡಿದ ಅನಂತರ ನಾಲ್ವರ ವಿರುದ್ಧಕ್ರಮ ಅಗತ್ಯ ಇರಲಿಲ್ಲ. ಜನಸಂಘದ ಕಾಲದಿಂದ ಪಕ್ಷ ಕಟ್ಟಿ ಬೆಳೆಸಿದವರನ್ನು ಉಚ್ಚಾಟಿಸಿದ್ದಾರೆ. ಅದರರ್ಥ ಕಾರ್ಯಕರ್ತರ ಪರಿಸ್ಥಿತಿ ಹೇಗಿರಬಹುದು ಎಂಬುದನ್ನು ಊಹಿಸಬಹುದು. ಬಿ.ಎಸ್. ಯಡಿ ಯೂರಪ್ಪ ಅವರು ಕೆಜಿಪಿ ಕಟ್ಟಿದಾಗಲೂ ಉಚ್ಚಾಟನೆ ಆಗಿದ್ದರು. ಹೀಗಾಗಿ ಉಚ್ಚಾಟನೆಗೆ ಮಹತ್ವ ಇಲ್ಲ ಎಂದರು.

ಮೋದಿಗಾಗಿ 42 ದಿನ ಮನೆ ಬಿಟ್ಟು ಕೆಲಸ ಮಾಡಿದ್ದೇನೆ. ವಿಧಾನಸಭೆ ಚುನಾವಣೆಯಲ್ಲೂ ಪಕ್ಷ ಸೂಚಿಸಿದ ಅಭ್ಯರ್ಥಿ ಪರ ಕೆಲಸ ಮಾಡಿದ್ದೇನೆ. ಶಾಸಕನಾಗಿದ್ದಾಗಲೇ ಟಿಕೆಟ್ ನಿರಾಕರಿಸಿದರು. ಪಕ್ಷದಲ್ಲಿ ಪದಾಧಿಕಾರಿಯನ್ನೂ ಪದಾಧಿಕಾರಿಯನ್ನೂ ಮಾಡಲಿಲ್ಲ. ಸಿಎಂ ಮಗ ಎನ್ನುವ ಕಾರಣಕ್ಕೆ ರಾಜಕಾರಣಿ ಆದವನಲ್ಲ. ಹಿಂದೂ ಜಾಗರಣ ವೇದಿಕೆಯ ಕಾರ್ಯ ಕರ್ತನಾಗಿ ಅನಂತರ ಸಾಮಾನ್ಯ
ಕಾರ್ಯಕರ್ತನ ನೆಲೆಯಲ್ಲಿ ಬೆಳೆದು ಬಂದಿದ್ದೇನೆ. ನನಗೆ ಟಿಕೆಟ್ ತಪ್ಪಿಸುವ ಬದಲು ಎಂಪಿ, ಸಿಎಂ ಮಕ್ಕಳ ಟಿಕೆಟ್ ತಪ್ಪಿಸಬಹುದಿತ್ತಲ್ಲವೇ ಎಂದು ಪ್ರಶ್ನಿಸಿದರು.

ಜಿಲ್ಲೆಯಲ್ಲಿ ಎರಡನೇ ಹಂತದ ನಾಯಕರನ್ನು ಬೆಳೆಸಿರುವುದು ನಾನು ಮಾತ್ರ. ನನಗೆ ಯಾವುದೇ ಅಧಿಕಾರದ ಅಮಲಿಲ್ಲ. ಡಾ.ಧನಂಜಯ ಸರ್ಜಿ ಅವರಿಗೆ ಟಿಕೆಟ್ ನೀಡುವ ಬದಲು ಸಾಮಾನ್ಯ ಕಾರ್ಯಕರ್ತರು ಒಬ್ಬರಿಗೆ ಪಕ್ಷ ಟಿಕೆಟ್ ನೀಡಬಹುದಿತ್ತು. ಆಗ ಸ್ವಲ್ಪ ಬೇಸರವಾಗುತ್ತಿದ್ದರೂ ಖಂಡಿತ ವಾಗಿಯೂ ಸ್ಪರ್ಧೆಯ ನಿರ್ಧಾರ ಮಾಡುತ್ತಿರಲಿಲ್ಲ. ಪಕ್ಷ ಹೇಳಿದ್ದನ್ನೆಲ್ಲ ಕೇಳಿಕೊಂಡು ಜೀ ಹುಜೂರು ಎನ್ನಲು ಸಾಧ್ಯವಿಲ್ಲ. ಇದೊಂದು ಅಗ್ನಿಪರೀಕ್ಷೆ ಎದುರಿಸುತ್ತೇನೆ ಎಂದರು.

ಪ್ರಮುಖರಾದ ಉಡುಪ, ಮಹೇಶ್ ಠಾಕೂರ್, ಉಪೇಂದ್ರ ನಾಯಕ್, ರೋಶನ್ ಶೆಟ್ಟಿ ಜುನೈದ್ ಉಪಸ್ಥಿತರಿದ್ದರು.