ಉಡುಪಿ: ವಾಹನ ದಟ್ಟಣೆಯ ಹೆಸರಿನಲ್ಲಿ ಉಡುಪಿಯ ಕಲ್ಸಂಕ ಜಂಕ್ಷನ್ ಅನ್ನು ಬ್ಯಾರಿಕೇಡ್ ಹಾಕಿ ಮುಚ್ಚಿರುವುದು ಅವೈಜ್ಞಾನಿಕ. ಈಗಾಗಲೇ ಟೆಂಡರ್ ಆಗಿರುವ ಟ್ರಾಫಿಕ್ ಸಿಗ್ನಲ್ ಯೋಜನೆ ಅನುಷ್ಠಾನಗೊಳಿಸಿ ಟ್ರಾಫಿಕ್ ಸಮಸ್ಯೆ ಪರಿಹರಿಸಬೇಕಿತ್ತು. ಆದರೆ ನನ್ನ ಅವಧಿಯಲ್ಲಿ ಟೆಂಡರ್ ಆಗಿದೆ ಎಂಬ ಕಾರಣಕ್ಕೆ ಶಾಸಕ ಯಶ್ ಪಾಲ್ ಸುವರ್ಣ ಈ ಯೋಜನೆಗೆ ತಡೆಯೊಡ್ಡುತ್ತಿದ್ದಾರೆ ಎಂದು ಮಾಜಿ ಶಾಸಕ ಕೆ. ರಘುಪತಿ ಭಟ್ ಆರೋಪಿಸಿದರು.
ಉಡುಪಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ರೀತಿಯ ಸಾರ್ವಜನಿಕ ಪ್ರಕಟಣೆ ಹೊರಡಿಸದೆ, ಗಜೆಟ್ ನೋಟಿಫಿಕೇಶನ್ ಮಾಡದೆ, ಆರ್‌ಟಿಎ ಸಭೆ ನಡೆಸದೆ ನಗರದ ಮುಖ್ಯ ಜಂಕ್ಷನ್ ಆಗಿರುವ ಕಲ್ಸಂಕ ಜಂಕ್ಷನ್ ಅನ್ನು ಬ್ಯಾರಿಕೇಡ್ ಗಳ ಮೂಲಕ ಬಂದ್ ಮಾಡಿರುವುದು ಕಾನೂನುಬಾಹಿರ. ಜಿಲ್ಲಾಧಿಕಾರಿ ಹಾಗೂ ಎಸ್ಪಿ ಜನರನ್ನು ಶೋಷಣೆ ಮಾಡುತ್ತಿದ್ದಾರೆ. ತಕ್ಷಣ ಬ್ಯಾರಿಕೇಡ್ ತೆರವುಗೊಳಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಇಲ್ಲದಿದ್ದರೆ ದೊಡ್ಡಮಟ್ಟದಲ್ಲಿ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಮಣಿಪಾಲದಿಂದ ಬರುವವರು ಸಿಟಿ ಬಸ್ ನಿಲ್ದಾಣವರೆಗೆ ತೆರಳಿ ಯೂ ಟರ್ನ್ ಮಾಡಿ ಗುಂಡಿಬೈಲಿಗೆ ತೆರಳುವ ಪರಿಸ್ಥಿತಿ ನಿರ್ಮಾಣ ಮಾಡಿರುವುದು ಸರಿಯಲ್ಲ. ನಮ್ಮದು ಜಂಗಲ್ ರಾಜ್ ಅಲ್ಲ. ಹೇಳಿದ್ದೆಲ್ಲವನ್ನು ಜನರು ಪಾಲಿಸಬೇಕೆಂಬ ಭ್ರಮೆಯಿಂದ ಅಧಿಕಾರಿಗಳು ಹೊರಬರಬೇಕು. ಜನರ ಭಾವನೆಗಳಿಗೆ ಸ್ಪಂದಿಸಿ ಕೆಲಸ ನಿರ್ವಹಿಸಬೇಕು ಎಂದರು.
ದೂರದ ಊರಿನಿಂದ ಶ್ರೀಕೃಷ್ಣ ದರ್ಶನಕ್ಕೆಂದು ಆಗಮಿಸುವ ಪ್ರವಾಸಿಗರು ದೊಡ್ಡ ಬಸ್ಸುಗಳಲ್ಲಿ ಆಗಮಿಸುತ್ತಾರೆ. ಅವರು ಕಡಿಯಾಳಿಯಲ್ಲಿ ತಮ್ಮ ಬಸ್ ಅನ್ನು ಯೂ ಟರ್ನ್ ಮಾಡಲು ಹರಸಾಹಸ ಪಡಬೇಕಾಗುತ್ತದೆ.
ಬ್ಯಾರಿಕೇಡ್ ಅಳವಡಿಕೆಯಿಂದಾಗಿ ಕಲ್ಸಂಕದಲ್ಲಿ ಸುಗಮ ಸಂಚಾರವಾದರೂ, ಕಡಿಯಾಳಿ ಹಾಗೂ ಸಿಟಿ ಬಸ್ ನಿಲ್ದಾಣದಲ್ಲಿ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಜಂಕ್ಷನ್ ಅನ್ನು ಬಂದ್ ಮಾಡುವುದು ಪರಿಹಾರವಲ್ಲ, ಬದಲಾಗಿ ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಯೋಜನೆಯನ್ನು ಕಾರ್ಯರೂಪಕ್ಕೆ ತರಬೇಕು ಎಂದು ತಿಳಿಸಿದರು.
ನನ್ನ ಅವಧಿಯಲ್ಲಿ ನಗರದ 13 ಕಡೆಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ವಿನೂತನ ರೀತಿಯ ಟ್ರಾಫಿಕ್ ಸಿಗ್ನಲ್ ಗಳನ್ನು ಅಳವಡಿಸಲು ಗುತ್ತಿಗೆ ನೀಡಲಾಗಿದೆ. ಗುತ್ತಿಗೆ ಪಡೆದ ಸಂಸ್ಥೆಯವರೇ ಟ್ರಾಫಿಕ್ ಕಂಬಗಳನ್ನು ಅಳವಡಿಸಿ, ಪ್ರತಿ ತಿಂಗಳು 20 ಸಾವಿರ ರೂ.ಯನ್ನು ನಗರಸಭೆ ಪಾವತಿಸುವಂತೆ ಷರತ್ತುಗಳನ್ನು ವಿಧಿಸಲಾಗಿತ್ತು. ಆದರೆ ಈ ಕಾಮಗಾರ ನನ್ನ ಅವಧಿಯಲ್ಲಿ ಟೆಂಡರ್ ಆಗಿದೆ ಎಂಬ ಕಾರಣಕ್ಕೆ ಇದನ್ನು ಅವೈಜ್ಞಾನಿಕ ಕಾಮಗಾರಿ ಎಂದು ಬಿಂಬಿಸಿ, ತಡೆಹಿಡಿಯಲಾಗಿದೆ ಎಂದು ದೂರಿದರು.
ಸುದ್ದಿಗೋಷ್ಠಿಯಲ್ಲಿ ಉದ್ಯಮಿ ಮಹೇಶ್ ಠಾಕೂರ್ ಉಪಸ್ಥಿತರಿದ್ದರು.