ಡಿ.14ರಂದು ಉಡುಪಿಯಲ್ಲಿ ಪ್ರಥಮ ಬಾರಿಗೆ ಕೊರಿಯನ್ ತಂಡದಿಂದ ಕ್ರಿಸ್ಮಸ್ ಕ್ರಿಸ್ತೋತ್ಸವ

ಉಡುಪಿ: ಉಡುಪಿಯ ಯುನೈಟೆಡ್ ಕ್ರಿಶ್ಚಿಯನ್ ಫೋರಂ, ಲೊಂಬಾರ್ಡ್ ಮಿಶನ್ ಆಸ್ಪತ್ರೆ, ಕರ್ನಾಟಕ ಯುವಕ ಸಂಘ ಮತ್ತು ಕರಾವಳಿ ಕ್ರಿಶ್ಚಿಯನ್ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿಯ ಸಹಯೋಗದೊಂದಿಗೆ “ಕ್ರಿಸ್ಮಸ್ ಕ್ರಿಸ್ತೋತ್ಸವ -2024” ಎಂಬ ವಿಶಿಷ್ಠ ಕಾರ್ಯಕ್ರಮವನ್ನು ಡಿಸೆಂಬರ್ 14ರ ಶನಿವಾರ ಸಂಜೆ 6ಗಂಟೆಗೆ ಉಡುಪಿ ಕ್ರಿಶ್ಚಿಯನ್ ಪಿಯು ಕಾಲೇಜಿನ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಕಾರ್ಯಕ್ರಮ ಆಯೋಜನಾ ಸಮಿತಿಯ ಸಂಚಾಲಕ ಡಾ. ಸುಶೀಲ್ ಜತ್ತನ್ನ ಹೇಳಿದರು.

ಈ ಕುರಿತು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಉಡುಪಿ ಜಿಲ್ಲೆಯಲ್ಲಿ ಮೊದಲ ಬಾರಿಗೆ ಇಂತಹ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಕ್ರಿಸ್ತೋತ್ಸವ ಕಾರ್ಯಕ್ರಮವು ನೆರೆದ ಸಭಿಕರಿಗೆ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಹಬ್ಬದ ಊಟವನ್ನು ಉಣ ಬಡಿಸಲಿದೆ ಎಂದರು.

ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ಡೆನಿಸ್ ಡೆಸಾ ಮಾತನಾಡಿ, ಸಂಜೆ 6ಗಂಟೆಯಿಂದ ಸ್ಥಳೀಯ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಂದ ಪರಿಸರ, ಶಾಂತಿ ಮತ್ತು ಸಾಮರಸ್ಯದ ಸಂದೇಶವನ್ನು ನೀಡುವ ನೃತ್ಯ ರೂಪಕ ಪ್ರದರ್ಶನಗೊಳ್ಳಲಿದೆ. ಸಂಜೆ 7ಗಂಟೆಗೆ ಕೊರಿಯನ್ ತಂಡದಿಂದ ನೃತ್ಯರೂಪಕ ಪ್ರದರ್ಶನಗೊಳ್ಳಲಿದೆ.

60 ಕಲಾವಿದರ ಈ ತಂಡವು ಕೆಲವು ಕೊರಿಯನ್ ಕಲಾವಿದರನ್ನು ಒಳಗೊಂಡಿದೆ. ಕನ್ನಡ ಭಾಷೆಯ ದ್ವನಿ ಮುದ್ರಿತ ಹಾಡುಗಳು ಮತ್ತು ಸಂಗೀತದಿಂದ ಸಮೃದ್ಧವಾದ ಈ ಪ್ರದರ್ಶನವು 60 ನಿಮಿಷಗಳ ಸಂಗೀತ ನಾಟಕವನ್ನು ಒಳಗೊಂಡಿದೆ. ಈ ಕಾರ್ಯಕ್ರಮ ಧ್ವನಿ ಮತ್ತು ಬೆಳಕಿನ ಜೊತೆಯಾಟದೊಂದಿಗೆ ಪ್ರದರ್ಶನಗೊಳ್ಳಲಿದೆ ಎಂದರು.

ಉಡುಪಿ ಬಿಷಪ್ ಜೆರಾಲ್ಡ್ ಐಸಾಕ್ ಲೋಬೊ, ಸಿಎಸ್,ಐ. ಕರ್ನಾಟಕ ದಕ್ಷಿಣ ಧರ್ಮಪ್ರಾಂತ್ಯ ಬಿಷಪ್ ಹೇಮಚಂದ್ರ ಕುಮಾರ್, ಬೆಂಗಳೂರಿನ ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಥಿಯಾಲಜಿಯ ಪ್ರಾಚಾರ್ಯರಾದ ಸೈಮನ್ ಅಬ್ರಾಹಾಂ ಮುಖ್ಯಾ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಯುನಾಯ್ಟೆಡ್ ಕ್ರಿಶ್ಚಿಯನ್ ಫೋರಂ ಉಡುಪಿ ಉಪಾಧ್ಯಕ್ಷರಾದ ಪ್ರಶಾಂತ್ ಜತ್ತನ್ನ, ಉಡುಪಿ ಶೋಕಮಾತಾ ಚರ್ಚಿನ ಪ್ರಧಾನ ಧರ್ಮಗುರು ಚಾರ್ಲ್ಸ್ ಮಿನೇಜಸ್, ಬ್ರಹ್ಮಾವರ ಸೈಂಟ್ ಮೇರಿಸ್ ಸೀರಿಯನ್ ಕ್ಯಾಥೆಡ್ರಲ್ ಇದರ ವಿಕಾರ್ ಜನರಲ್ ಮಥಾಯಿ, ಸಿಎಸ್ ಐ ಉಡುಪಿ ಪ್ರಾಂತ ಸಭಾ ಪಾಲಕ ಐವನ್ ಡಿ ಸೋನ್ಸ್, ಲಿಯೊ ಡಿಸೋಜಾ, ಪಾಸ್ಟರ್ ಕೆ.ವಿ. ಪೌಲ್, ಎಬನೇಜರ್ ಕ್ರಿಸ್ಟೋಫರ್ ಕರ್ಕಡ, ಮಂಜು ಗಿಡಿ ಉಪಸ್ಥಿತರಿದ್ದರು.