ಉಡುಪಿ: “ಗಣಿತಶಾಸ್ತ್ರ ಕೇವಲ ಒಂದು ವಿಷಯವಲ್ಲ ಇದು ಜೀವನ ಕೌಶಲ್ಯಗಳನ್ನು ತಿಳಿಸಿಕೊಡುವ ಜೀವನದ ಅನಿವಾರ್ಯ ಭಾಗ. ನಾವು ಪ್ರತಿ ದಿನ ಅವಲಂಬಿಸುವ ಕೆಲಸ ಕಾರ್ಯಗಳು ಮತ್ತು ಸಮಸ್ಯೆಗಳ ಪರಿಹಾರಗಳು ಗಣಿತಶಾಸ್ತ್ರದ ಮೇಲೆ ಅವಲಂಬಿತವಾಗಿವೆ.
ಮಕ್ಕಳು ಹುಟ್ಟಿದ ಕ್ಷಣದಿಂದ ತಮ್ಮ ಸುತ್ತಲಿನ ಪ್ರಪಂಚವನ್ನು ಅರ್ಥಮಾಡಿಕೊಳ್ಳುವ ಸಹಜ ಕುತೂಹಲ ಮತ್ತು ವಿಮರ್ಶಾತ್ಮಕ ಚಿಂತನೆಗೆ ಗಣಿತಶಾಸ್ತ್ರವು ಅವರ ಕೌಶಲ್ಯವನ್ನು ಅಭಿವೃದ್ಧಿಪಡಿಸಲು ಪರಿಪೂರ್ಣ ವೇದಿಕೆಯನ್ನು ಒದಗಿಸುತ್ತದೆ.
ಮಕ್ಕಳು ಗಣಿತದ ಸಮಸ್ಯೆಗೆ ಅನುಸರಿಸುವ ಮತ್ತು ಪ್ರದರ್ಶಿಸುವ ಮೆದುಳಿನ ಚಟುವಟಿಕೆ ಹಾಗೂ ರಚನಾತ್ಮಕ ವಿಧಾನವು ಶೈಕ್ಷಣಿಕವಾಗಿ ಮಾತ್ರವಲ್ಲದೆ ನಿಜ ಜೀವನದ ಸನ್ನಿವೇಶಗಳಲ್ಲಿಯೂ ಅಮೂಲ್ಯವಾದ ಪಾತ್ರವನ್ನು ವಹಿಸಿ ಜೀವನದ ಸವಾಲುಗಳನ್ನು ಎದುರಿಸಲು ಅವರನ್ನು ಸಿದ್ಧಪಡಿಸುತ್ತದೆ.
ಲೆಕ್ಕಾಚಾರ ತಪ್ಪಿದರೆ ಯೋಜನೆಗಳೆಲ್ಲ ಹಳಿ ತಪ್ಪುತ್ತವೆ. ಇಡೀ ಪ್ರಪಂಚವು ಗಣಿತದ ತತ್ವಗಳ ಮೇಲೆ ಕಾರ್ಯ ನಿರ್ವಹಿಸುತ್ತದೆ. ಎಂದು ನಿಟ್ಟೆ ಎನ್.ಎಂ.ಎ.ಮ್ ಇನ್ಸ್ಟಿಟ್ಯೂಟ್ ನ ಇನ್ಫಾರ್ಮಶನ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಪ್ರೊಫೆಸರ್ ವಾಸುದೇವ ಆಚಾರ್ಯ ಅವರು ನುಡಿದರು.
ಅವರು ಉಡುಪಿಯ ಡಾ. ಜಿ ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಮಾನುಜನ್ ಅವರ 137ನೇ ಹುಟ್ಟುಹಬ್ಬದ ಪ್ರಯುಕ್ತ ಆಯೋಜಿಸಲಾದ ರಾಷ್ಟ್ರೀಯ ಗಣಿತ ದಿನದ ಆಚರಣೆಯ ಉದ್ಘಾಟನಾ ಸಮಾರಂಭವನ್ನು ನೆರವೇರಿಸಿ ಮಾತನಾಡಿದರು.
ಐ.ಕ್ಯೂ ಎ.ಸಿ ಸಂಚಾಲಕರು ಹಾಗೂ ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಶ್ರೀಮತಿ ಅಡಿಗ ಇವರು ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಕುಮಾರಿ ಚೈತ್ರ ಪ್ರಾರ್ಥಿಸಿದರು. ಗಣಿತಶಾಸ್ತ್ರ ವಿಭಾಗದ ಸಹಪ್ರಾಧ್ಯಾಪಕರಾದ ಡಾ. ಸುರೇಖಾ ಅವರು ಅತಿಥಿಗಳನ್ನು ಪರಿಚಯಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ.ಶ್ರೀಧರ್ ಪ್ರಸಾದ ಕೆ. ಅವರು ಅಧ್ಯಕ್ಷತೆಯನ್ನು ವಹಿಸಿದ್ದರು. ಕಾಲೇಜಿನ ಆಂಗ್ಲ ಭಾಷಾ ವಿಭಾಗದ ಮುಖ್ಯಸ್ಥರಾದ ಸೋಜನ್ ಕೆ ಜಿ ಹಾಗೂ ಗಣಿತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಪ್ರಸಾದ್ ಹೆಚ್ ಎಂ ಕುಮಾರಿ ಪಲ್ಲವಿ, ಗ್ರಂಥಪಾಲಕ ವೆಂಕಟೇಶ್, ಸ್ನಾತಕೋತ್ತರ ವಿಭಾಗದ ಸಂಚಾಲಕರಾದ ಶ್ರೀ ರವಿಪ್ರಸಾದ್ ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ರಾಮಾನುಜನ್ ಹುಟ್ಟು ಹಬ್ಬದ ಪ್ರಯುಕ್ತ ನಡೆಸಲಾದ ವಿವಿದ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಮತ್ತು ರಾಮಾನುಜನ್ ನಂಬರ್ ನ ಅದೃಷ್ಟ ಶಾಲಿ ವಿಜೇತರಿಗೆ ಈ ಸಂದರ್ಭದಲ್ಲಿ ಬಹುಮಾನಗಳನ್ನು ವಿತರಿಸಲಾಯಿತು.
ಗಣಿತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಸುಜಾತ ವಿ ಶೇಟ್ ಧನ್ಯವಾದ ಸಮರ್ಪಿಸಿದರು. ಗಣಿತಶಾಸ್ತ್ರ ವಿಭಾಗದ ದ್ವಿತೀಯ ಎಂ.ಎಸ್ ಸಿ. ವಿದ್ಯಾರ್ಥಿನಿ ಮೋನಿಷ ಕಾರ್ಯಕ್ರಮ ನಿರ್ವಹಿಸಿದರು.