ಡಾ. ಜಿ. ಶಂಕರ್ ಸರಕಾರಿ ಪ್ರಥಮ ದರ್ಜೆ ಕಾಲೇಜು: ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ

ಉಡುಪಿ, ಫೆ.26: ಉದಾತ್ತ ಸೇವಾ ಮನೋಭಾವದಿಂದ ಮಾಡುವ ಯಾವುದೇ ಕೆಲಸ ಮನಸ್ಸಿಗೆ ಸಂತೋಷವನ್ನು ನೀಡುತ್ತದೆ. ರಾಷ್ಟ್ರೀಯ ಸೇವಾ ಯೋಜನೆಯು ಇಂತಹ ಸೇವೆಯನ್ನು ಸಮುದಾಯಕ್ಕೆ ನೀಡಲು ಒಂದು ಒಳ್ಳೆಯ ವೇದಿಕೆಯನ್ನು ವಿದ್ಯಾರ್ಥಿಗಳಿಗೆ ಒದಗಿಸುತ್ತದೆ. ಉತ್ತಮ ಅವಕಾಶಗಳನ್ನು ಬಳಸಿಕೊಂಡರೆ ವಿದ್ಯಾರ್ಥಿ ಜೀವನದಲ್ಲಿಯೇ ಸಫಲತೆಯನ್ನು ಪಡೆಯ ಬಹುದು ಎಂದು ರೆಡ್‌ಕ್ರಾಸ್ ಸಂಸ್ಥೆ ಉಡುಪಿ ಇಲ್ಲಿನ ಸಭಾಪತಿ, ಬಸ್ರೂರು ರಾಜೀವ ಶೆಟ್ಟಿ ಅಭಿಪ್ರಾಯ ಪಟ್ಟರು.

ಇವರು ಜಿಲ್ಲೆಯ ಡಾ. ಜಿ. ಶಂಕರ್ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡು ಇಲ್ಲಿನ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಬಿಲ್ಲವ ಸೇವಾ ಸಂಘ ಮತ್ತು ನಾರಾಯಣಗುರು ಸಮುದಾಯ ಭವನ, ಕಡೆಕಾರು ಇಲ್ಲಿ ಆಯೋಜಿಸಲಾದ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಉತ್ತಮ ವ್ಯವಸ್ಥೆಗಳನ್ನು ನಿರೀಕ್ಷಿಸುವುದರಿಂದ ಎನನ್ನು ಪಡೆಯಲು ಸಾಧ್ಯವಾಗುವುದಿಲ್ಲ ಬದಲಾಗಿ ನಾವು ಇರುವ ವ್ಯವಸ್ಥೆಗಳನ್ನು ಉತ್ತಮ ಪಡಿಸಲು ಪ್ರಯತ್ನಿಸಿದರೆ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದರು.

ಪೂರ್ಣಿಮ ಸಹಾಯಕ ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರು ಮಾತನಾಡಿ ಇಂದು ಬಿಡುವಿಲ್ಲದ ಜೀವನ ಪದ್ಧತಿಯಲ್ಲಿ ಹೆಚ್ಚಿನ ಜನರು ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಕ್ರೀಡೆ, ಕಲೆ, ಸಾಂಸ್ಕೃತಿಕ ಚಟುವಟಿಕೆ ಮತ್ತು ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳುವುದರಿಂದ ಮಾನಸಿಕ ಒತ್ತಡಗಳಿಂದ ಪಾರಾಗಬಹುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಶ್ರೀಧರ್ ಪ್ರಸಾದ್ ಕೆ, ವಹಿಸಿದ್ದರು. ವೇದಿಕೆಯಲ್ಲಿ ಸಾಫಲ್ಯ ಟ್ರಸ್ಟ್ ನ ನಿರ್ದೇಶಕರಾದ ನಿರುಪಮ ಪ್ರಸಾದ್, ಬಿಲ್ಲವ ಸೇವಾ ಸಂಘ ಕಡೆಕಾರ್ ಅಧ್ಯಕ್ಷರಾದ ಶಂಕರ್ ಜಿ ಸುವರ್ಣ, ಯುವಕ ಮಂಡಲ ಕಡೆಕಾರ್‌ನ ಅಧ್ಯಕ್ಷ ದೀಪಕ್ ಪುತ್ರನ್, ಮಾಜಿ ಪಂಚಾಯತ್ ಸದಸ್ಯರಾದ ತಾರಾನಾಥ ಆರ್ ಸುವರ್ಣ, ಚೈತನ್ಯ ಫೌಂಡೇಶನ್ ಅಧ್ಯಕ್ಷರಾದ ಸುನಿಲ್ ಸಾಲಿಯಾನ್ ಮತ್ತು ಕಾಲೇಜಿನ ವಿಜ್ಞಾನ ನಿಕಾಯದ ಡೀನ್ ಪ್ರೊ. ಅಡಿಗ ಉಪಸ್ಥಿತರಿದ್ದರು.

ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಾಧಿಕಾರಿ ಪ್ರೊ. ನಿಕೇತನ ಪ್ರಾಸ್ತವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕು. ಸಮೃದ್ಧಿ ದ್ವಿತೀಯ ಬಿ.ಕಾಂ ಕಾರ್ಯಕ್ರಮವನ್ನು ನಿರೂಪಿಸಿ. ರಾ, ಸೇ, ಯೋಜನಾಧಿಕಾರಿ ವಿಧ್ಯಾ ಡಿ ವಂದಿಸಿದರು.