ಡಾ. ಎಂ. ಮೋಹನ ಆಳ್ವ -72 : ಇಂದು ಕಾರ್ಕಳ ಜ್ಞಾನಸುಧಾದಲ್ಲಿ ಸವ್ಯಸಾಚಿ ಸಂಭ್ರಮ.

ಕಾರ್ಕಳ: ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ, ಕ್ರೀಡಾ, ಆರೋಗ್ಯ, ದೇಶಸೇವೆ ಹೀಗೆ ವಿವಿಧ ಕ್ಷೇತ್ರಗಳಲ್ಲಿ ತನ್ನನ್ನು ಸಮರ್ಪಿಸಿಕೊಂಡು ಅದ್ವೀತಿಯ ಸಾಧನೆ ಮಾಡಿರುವ ಆಧುನಿಕ ಮೂಡುಬಿದಿರೆಯ ನಿರ್ಮಾತೃ ಡಾ. ಎಂ. ಮೋಹನ ಆಳ್ವರಿಗೆ ಕಾರ್ಕಳ ಗಣಿತನಗರದ ಜ್ಞಾನಸುಧಾ ಆವರಣದಲ್ಲಿ ಮೇ 31ರ ಶುಕ್ರವಾರ ಸಂಜೆ 5:30ಕ್ಕೆ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಆಶೀರ್ವಚನ ನೀಡಲಿದ್ದಾರೆ. ನಿಟ್ಟೆ ಎಜ್ಯುಕೇಶನ್‌ ಟ್ರಸ್ಟ್‌ ಅಧ್ಯಕ್ಷ ಎನ್. ವಿನಯ ಹೆಗ್ಡೆ ಅಧ್ಯಕ್ಷತೆ ವಹಿಸಲಿದ್ದಾರೆ.

ಪುಸ್ತಕ ಅನಾವರಣ:
ಆಳ್ವರಿಗೆ 72 ಸಂವತ್ಸರ ತುಂಬಿದ ಹಿನ್ನೆಲೆಯಲ್ಲಿ ಹೊರತರಲಾದ ಪುಸ್ತಕ ಸವ್ಯಸಾಚಿ. ಇದೇ ಸಂದರ್ಭದಲ್ಲಿ ಅನಾವರಣಗೊಳ್ಳಲಿದೆ. ಆಳ್ವರ ಕುರಿತಾದ ಈ ಪುಸ್ತಕ 208 ಪುಟಗಳನ್ನು ಹೊಂದಿದ್ದು, ವಿವಿಧ ಕ್ಷೇತ್ರದ 72 ಗಣ್ಯರ ಲೇಖನ ಒಳಗೊಂಡಿದೆ. ಆಳ್ವರ ಜೀವನ, ವ್ಯಕ್ತಿತ್ವ, ಸಾಧನೆಗಳ ಕುರಿತಾಗಿರುವ ಈ ಪುಸ್ತಕದಲ್ಲಿ ಅಪರೂಪದ ಮತ್ತು ಸುಂದರವಾದ ಚಿತ್ರಗಳು ಅಚ್ಚಾಗಿವೆ.

ಆರ್ಥಿಕ ನೆರವು:
ಆಳ್ವರ ಹುಟ್ಟುಹಬ್ಬದ ಪ್ರಯುಕ್ತ ಅನಾರೋಗ್ಯದಿಂದ ಬಳಲುತ್ತಿರುವ 10 ಮಂದಿ ಹಾಗೂ 5 ಸಮಾಜ ಸೇವಾ ಸಂಸ್ಥೆಗಳಿಗೆ ತಲಾ 10ಸಾವಿರದಂತೆ ಆರ್ಥಿಕ ನೆರವನ್ನು ಅಜೆಕಾರ್‌ ಪದ್ಮಗೋಪಾಲ್‌ ಎಜ್ಯುಕೇಶನ್‌ ಟ್ರಸ್ಟ್‌ ನೀಡಲಿದೆ. ಕಾರ್ಕಳ ರೋಟರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್‌ ಗೊಳಗಾಗುವ ರೋಗಿಗಳ ಶುಶ್ರೂಷೆಗಾಗಿ ರೂ.2ಲಕ್ಷ ಸಹಕಾರ ನೀಡಲಿದೆ.
ಈ ಕಾರ್ಯಕ್ರಮದಲ್ಲಿ ಆಳ್ವರ ಹಿತೈಷಿಗಳು, ಸಾರ್ವಜನಿಕರು ಭಾಗವಹಿಸುವಂತೆ ಶಾಸಕ ವಿ. ಸುನಿಲ್‌ ಕುಮಾರ್‌, ಅಜೆಕಾರ್‌ ಪದ್ಮಗೋಪಾಲ್‌ ಎಜ್ಯುಕೇಶನ್‌ ಟ್ರಸ್ಟ್‌ (ರಿ.) ಅಧ್ಯಕ್ಷ ಡಾ. ಸುಧಾಕರ್‌ ಶೆಟ್ಟಿ, ಆಳ್ವರ ಅಭಿಮಾನಿಗಳ ಬಳಗ – ಕಾರ್ಕಳ ವಿನಂತಿ ಮಾಡಿರುತ್ತಾರೆ.