ಟಿ20 ವಿಶ್ವಕಪ್ ಗೆಲ್ಲುತ್ತಿದ್ದಂತೆ ಟಿ20 ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ವಿರಾಟ್, ರೋಹಿತ್.

ಭಾರತ ಟಿ20 ವಿಶ್ವಕಪ್ ಗೆಲ್ಲುತ್ತಿದ್ದಂತೆ ನಾಯಕ ರೋಹಿತ್ ಶರ್ಮಾ, ಮಾಜಿ ನಾಯಕ ವಿರಾಟ್ ಕೊಹ್ಲಿ ಕೊನೆಗೊಂದು ಬೇಸರ ಮೂಡಿಸಿದ್ದಾರೆ. ಟಿ20 ವಿಶ್ವಕಪ್ ಗೆಲುವಿನ ಬೆನ್ನಲ್ಲೇ ಈ ಇಬ್ಬರು ದಿಗ್ಗಜರು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ.

ವಿರಾಟ್ ಕೊಹ್ಲಿ ಪಂದ್ಯ ಮುಗಿದ ಬಳಿಕ ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸುವ ವೇಳೆ ತಮ್ಮ ನಿವೃತ್ತಿಯ ಬಗ್ಗೆ ಖಚಿತಪಡಿಸಿದರು. ನಾಯಕ ರೋಹಿತ್ ಶರ್ಮಾ ಅವರೂ ಬಳಿಕ ತನ್ನ ಟಿ20 ನಿವೃತ್ತಿಯನ್ನು ಘೋಷಿಸಿದರು.

ವಿರಾಟ್ ಕೊಹ್ಲಿ ಅವರು ಇದು ನನ್ನ ಕೊನೆಯ ಟಿ20 ವಿಶ್ವಕಪ್. ಇದು ಭಾರತದ ಪರ ನನ್ನ ಟಿ20 ಪಂದ್ಯ. ಮುಂದಿನ ತಲೆಮಾರು ಜವಾಬ್ದಾರಿ ಹೊತ್ತು ಕೊಳ್ಳಲು ಇದು ಸಕಾಲ ಎಂದು ಪಂದ್ಯದ ಬಳಿಕ ಹೇಳಿದ್ದಾರೆ.

ಹಾಗೂ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರೋಹಿತ್ ಶರ್ಮಾ, “ಇದು ನನ್ನ ಕೊನೆಯ ಅಂತಾರಾಷ್ಟ್ರೀಯ ಟಿ20 ಪಂದ್ಯವೂ ಹೌದು. ಈ ಫಾರ್ಮ್ಯಾಟ್ ಗೆ ವಿದಾಯ ಹೇಳಲು ಇದಕ್ಕಿಂತ ಸಕಾಲ ಇನ್ನೊಂದಿಲ್ಲ. ನಾನು ಫಾರ್ಮ್ಯಾಟ್ ನೊಂದಿಗೆ ನನ್ನ ವೃತ್ತಿ ಜೀವನ ಆರಂಭಿಸಿದ್ದೆ. ನಾನು ಕಪ್ ಗೆಲ್ಲಬೇಕೆಂದು ಬಯಸಿದ್ದೆ” ಎಂದು ಹೇಳಿದರು.

ಶನಿವಾರದ ಪಂದ್ಯದಲ್ಲಿ 59 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್‌ ಸಹಿತ 76 ರನ್‌ ಸಿಡಿಸಿದ ಕೊಹ್ಲಿ, ತಂಡದ ಮೊತ್ತ ಹೆಚ್ಚಿಸುವಲ್ಲಿ ಗಣನೀಯ ಕೊಡುಗೆ ನೀಡಿದ್ದರು. 35 ವರ್ಷದ ಕೊಹ್ಲಿ 125 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ 4188 ರನ್‌ ಬಾರಿಸಿದ್ದಾರೆ. ಇದರಲ್ಲಿ 1 ಶತಕ, 38 ಅರ್ಧ ಶತಕಗಳು ಸೇರಿವೆ.
ಟಿ20ಯಲ್ಲಿ 159 ಪಂದ್ಯಗಳನ್ನು ಆಡಿರುವ ರೋಹಿತ್‌, 4231 ರನ್‌ ಗಳಿಸಿದ್ದು, ಇದರಲ್ಲಿ 5 ಶತಕ ಹಾಗೂ 37 ಅರ್ಧಶತಕಗಳು ಸೇರಿವೆ.