ಜ. 26ರಂದು ಸಮುದ್ರ ಕಿನಾರೆಯಲ್ಲಿ ವಿಷ್ಣು ಸಹಸ್ರ ನಾಮ ಸ್ತೋತ್ರ ಪಠಿಸುವ ಮಹಾಭಿಯಾನ

ಉಡುಪಿ: ಕಡಲ್ಕೊರೆತದಂತಹ ಪ್ರಾಕೃತಿಕ‌ ವಿಕೋಪಗಳನ್ನು ತಡೆಗಟ್ಟಲು ಸಲುವಾಗಿ ಹಾಗೂ ಲೋಕಕಲ್ಯಾಣಕ್ಕಾಗಿ ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ ಸಮಿತಿ ವತಿಯಿಂದ ಇದೇ ಜ.26ರಂದು ಸಂಜೆ 4ರಿಂದ 6ಗಂಟೆಯವರೆಗೆ ಸಮುದ್ರ ಕಿನಾರೆಯ 108 ಸ್ಥಳಗಳಲ್ಲಿ ವಿಷ್ಣು ಸಹಸ್ರ ನಾಮ ಸ್ತೋತ್ರವನ್ನು ಸಾಮೂಹಿಕವಾಗಿ ಪಠಿಸುವ ಮಹಾಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಶಶೀಂದ್ರ ಕುಮಾರ್ ತಿಳಿಸಿದರು.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು,ಕೇರಳದ ಕಣ್ಣೂರಿನಿಂದ ಉಡುಪಿಯ ಶಿರೂರಿನವರೆಗೆ 108 ಜನರ ಗುಂಪು 108 ಕೇಂದ್ರಗಳಲ್ಲಿ ವಿಷ್ಣು ಸಹಸ್ರನಾಮ ಸ್ತೋತ್ರವನ್ನು 6 ಬಾರಿ ಪಠಿಸಲಿದೆ. ಈ ಕಾರ್ಯಕ್ರಮದ ಯಶಸ್ಸಿಗಾಗಿ ಈಗಾಗಲೇ ಸಮುದ್ರ ದಡದಲ್ಲಿ ಸ್ಥಳಗಳನ್ನು ಗುರುತಿಸುವ ಕೆಲಸ ನಡೆದಿದೆ. ದೂರದ ಊರುಗಳಿಂದ ಬರುವವರಿಗೆ ವ್ಯವಸ್ಥೆ, ಊಟೋಪಚಾರ, ಉಪಾಹಾರ, ಶಾಮಿಯಾನದ ವ್ಯವಸ್ಥೆಗಳನ್ನು ಪಾವಂಜೆಯ ಶ್ರೀ ನಾಗವೃಜ ಕ್ಷೇತ್ರದ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ರಿಲೀಜಿಯಸ್ ಟ್ರಸ್ಟ್ ಮತ್ತು ಶ್ರೀ ಅಯೋಧ್ಯಾ ರಿಲೀಜಿಯಸ್‌ ಟ್ರಸ್ಟ್‌ ವತಿಯಿಂದ ಮಾಡಲಾಗುವುದು ಎಂದರು.

ಯಾವುದೇ ಘೋಷಣೆ, ಭಾಷಣ, ಧ್ವನಿವರ್ಧಕಗಳಿಲ್ಲದೆ ಶ್ರದ್ಧೆಯಿಂದ ಸಮುದ್ರರಾಜನಿಗೆ ಅಭಿಮುಖವಾಗಿ ಕುಳಿತು ಪಠಿಸುವ ವಿಶೇಷ ಕಾರ್ಯಕ್ರಮ ಇದಾಗಿದೆ. ಈಗಾಗಲೇ ಸುಮಾರು 150 ಕ್ಕಿಂತಲೂ ಹೆಚ್ಚು ತಂಡಗಳು ಪಠಣಾಭ್ಯಾಸದಲ್ಲಿ ತೊಡಗಿದ್ದು, ಜ. 26ರಂದು ಸಾಮೂಹಿಕವಾಗಿ ಸ್ತೋತ್ರ ಪಠಿಸಲಿದ್ದಾರೆ. ಸ್ಥಳೀಯ ಮುಖಂಡರು ಸಮುದ್ರರಾಜನಿಗೆ ಕ್ಷೀರಾಭಿಷೇಕ ಮಾಡಿ ಪೂಜಿಸುವುದರೊಂದಿಗೆ ಪಠಣ ಆರಂಭವಾಗಿ ಶಾಂತಿ ಮಂತ್ರದೊಂದಿಗೆ ಮುಕ್ತಾಯವಾಗುತ್ತದೆ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಸಮಿತಿಯ ಕಾರ್ಯಾಧ್ಯಕ್ಷ ಕಲ್ಕೆರೆ ಪ್ರೇಮಾನಂದ ಶೆಟ್ಟಿ ಇದ್ದರು.