ಜ.24ರಿಂದ 26ರವರೆಗೆ ಬ್ರಹ್ಮಾವರದಲ್ಲಿ ಆರೋಗ್ಯ ಇಲಾಖೆಯ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾಟ

ಉಡುಪಿ: ಕ್ಷಯ ಮುಕ್ತ ಉಡುಪಿ ಜಿಲ್ಲೆಯನ್ನಾಗಿ ಮಾಡುವ ಉದ್ದೇಶದಿಂದ ಜ.24ರಿಂದ 26ರವರೆಗೆ ಬ್ರಹ್ಮಾವರ ಎಸ್‌ಎಂಎಸ್ ಕ್ರೀಡಾಂಗಣದಲ್ಲಿ ‘ಎನ್‌ಟಿಇಪಿ-ಸ್ವಾಸ್ಥ್ಯ ಟ್ರೋಫಿ’ ರಾಜ್ಯಮಟ್ಟದ ಆರೋಗ್ಯ ಇಲಾಖೆಯ ಸಿಬ್ಬಂದಿಗಳ ಕ್ರಿಕೆಟ್ ಪಂದ್ಯಾಟವನ್ನು ಹಮ್ಮಿಕೊಳ್ಳಲಾಗಿದೆ.

ಈ ಪಂದ್ಯಾಟದ ಪೋಸ್ಟರನ್ನು ಕುಂದ ಗನ್ನಡದ ಸಾಂಸ್ಕೃತಿಕ ರಾಯಭಾರಿ ಮನು ಹಂದಾಡಿ ಉಡುಪಿ ಪತ್ರಿಕಾ ಭವನದಲ್ಲಿ ಬಿಡುಗಡೆಗೊಳಿಸಿದರು.

ಆರೋಗ್ಯ ಇಲಾಖೆ ಕ್ಷಯ ರೋಗ ವಿಭಾಗದ ನೌಕರರ ಸಂಘದ ಜಿಲ್ಲಾಧ್ಯಕ್ಷ ಅಲಂದೂರು ಮಂಜುನಾಥ್ ಮಾತನಾಡಿ, ಪಂದ್ಯಾಟದಲ್ಲಿ ರಾಜ್ಯದ ಒಟ್ಟು 18 ತಂಡಗಳು ಭಾಗವಹಿಸಲಿವೆ. ಈ ಸಂದರ್ಭದಲ್ಲಿ ಜಿಲ್ಲೆಯ ನೂರು ಕ್ಷಯ ರೋಗಿಗಳಿಗೆ ದಾನಿಗಳ ನೆರವಿನಿಂದ ಪೌಷ್ಠಿಕ ಆಹಾರದ ಕಿಟ್ ವಿತರಿಸಲಾಗುವುದು. ಅದೇ ರೀತಿ ಕ್ಷಯ ರೋಗ ತಪಸಾಣಾ ಶಿಬಿರವನ್ನು ಹಮ್ಮಿಕೊಳ್ಳಲಾಗುತ್ತದೆ. ಮಧುಮೇಹ, ರಕ್ತದೊತ್ತಡ, ಕ್ಯಾನ್ಸರ್ ಸ್ಕ್ರೀನಿಂಗ್ ಚಟುವಟಿಕೆ ನಡೆಸಲಾಗುವುದು. ತಂಬಾಕು ವ್ಯಸನಿಗಳಿಗೆ ಆಪ್ತ ಸಮಾಲೋಚನೆ ಮತ್ತು ಚಿಕಿತ್ಸೆ ನೀಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಐ.ಪಿ.ಗಡಾದ್, ಜಿಲ್ಲಾ ಕ್ಷಯ ರೋಗ ನಿರ್ಮೂಲನ ಅಧಿಕಾರಿ ಡಾ.ಚಿದಾನಂದ ಸಂಜು, ಆರೋಗ್ಯ ಇಲಾಖಾಧಿಕಾರಿ ಡಾ.ಪ್ರಶಾಂತ್ ಭಟ್ ಉಪಸ್ಥಿತರಿದ್ದರು.