ಜು.30ರಂದು “ರಾಗ್ ಪರಿಚಯ್” ವಿಶೇಷ ಕಾರ್ಯಕ್ರಮ.

ಮಂಗಳೂರು: ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಅಪರೂಪ ಹಾಗೂ ಅಪ್ರಚಲಿತ ರಾಗಗಳ ಹಾಡುಗಾರಿಕೆ ಹಾಗೂ ರಾಗಗಳ ಕುರಿತು ಮಾಹಿತಿ ನೀಡುವ “ರಾಗ್ ಪರಿಚಯ” ಎಂಬ ವಿಶೇಷ ಕಾರ್ಯಕ್ರಮವನ್ನು ಮಂಗಳೂರಿನ ಸಂಗೀತ ಭಾರತಿ ಪ್ರತಿಷ್ಠಾನವು ಜೂನ್ 30ರಂದು ಸಂಜೆ 5.30ರಿಂದ ನಗರದ ಶಾರದಾ ವಿದ್ಯಾಲಯದ ಧ್ಯಾನ ಮಂದಿರದಲ್ಲಿ ಆಯೋಜಿಸಿದೆ. ಇದೊಂದು ಅಪರೂಪ ಹಾಗೂ ವಿಶೇಷ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮದಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಅಪರೂಪ ಹಾಗೂ ಅಪ ರಾಗಗಳನ್ನು ರತೀಂದ್ರ ದಾಸ ಗುಪ್ತ, ಮಾನಸ ಶಾಸ್ತ್ರೀ ಹಾಗೂ ನಾಗ್‍ಕಿರಣ್ ನಾಯಕ್ ಹರೇಕಳ ಅವರು ಹಾಡಲಿದ್ದಾರೆ. ತಬ್ಲಾದಲ್ಲಿ ಡಾ. ಸಾಗರ್ ಭರತ್ ರಾಜ್ ಹಾಗೂ ಹಾರ್ಮೊನಿಯಂನಲ್ಲಿ ಪಂಡಿತ್ ವ್ಯಾಸಮೂರ್ತಿ ಕಟ್ಟಿ ಅವರು ಸಹಕರಿಸಲಿದ್ದಾರೆ.

ಈ ರಾಗಗಳ ಕುರಿತು ಸಂಪೂರ್ಣ ಮಾಹಿತಿ, ರಾಗದ ಶ್ರೀಮಂತಿಕೆ, ಏರಿಳಿತ, ಶೈಲಿ ಹೀಗೆ ರಾಗದ ಎಲ್ಲ ಮಗ್ಗುಳುಗಳ ಕುರಿತು ಮಾಹಿತಿಯನ್ನು ಹಾಗೂ ಬಂದಿಶ್ ಕುರಿತು ವಿವರಣೆಯನ್ನು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ದಿಗ್ಗಜ ಕಲಾವಿದರಾದ ಪಂಡಿತ್ ವ್ಯಾಸಮೂರ್ತಿ ಕ ಅವರು ವಿವರಣೆ ನೀಡಲಿದ್ದಾರೆ. ಬಳಿಕ ರಾಗದ ಕುರಿತು ಸಂಗೀತಾಸಕ್ತರ ಪ್ರಶ್ನೆಗಳಿಗೆ ಸಂಗೀತಗಾರರ ಉತ್ತರಿಸಲಿದ್ದಾರೆ. ಅಪರೂಪದ ರಾಗಗಳನ್ನು ಜನರಿಗೆ ಪರಿಚಯಿಸುವ ಉದ್ದೇಶದಿಂದ ಇಂತಹ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ.

ಹಿಂದೂಸ್ತಾನಿ ಸಂಗೀತಾಸಕ್ತರಿಗೆ,ಹಿಂದೂಸ್ತಾನಿ ಸಂಗೀತ ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ, ಸಹಕಲಾವಿದರಿಗೆ ಇದೊಂದು ಸುವರ್ಣ ಅವಕಾಶವಾಗಿದೆ ಎಂದು ಸಂಗೀತ ಭಾರತೀ ಪ್ರತಿಷ್ಠಾನದ ಉಪಾಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್ ತಿಳಿಸಿದ್ದಾರೆ. ಸಂಗೀತ ಪ್ರಕಾರಗಳ ಅತ್ಯಂತ ಜನಪ್ರಿಯ ರಾಗಗಳ ಹಾಡುಗಳನ್ನು ಸಾಮಾನ್ಯವಾಗಿ ಎಲ್ಲ ಕಡೆಗಳಲ್ಲಿ ಕೇಳುತ್ತೇವೆ. ಆದರೆ ಜನಸಾಮಾನ್ಯರು ನಿತ್ಯ ಜೀವನದಲ್ಲಿ ಸಾಮಾನ್ಯವಾಗಿ ಕೇಳದ ಹಲವು ರಾಗಗಳು ತೆರೆ ಮರೆಯಲ್ಲಿವೆ. ಅವುಗಳು ಸುಂದರ ಹಾಗೂ ಶ್ರೀಮಂತವಾಗಿವೆ. ನಾನಾ ಕಾರಣಗಳಿಂದಾಗಿ ಸಂಗೀತ ಕಲಿಕೆಯ ವಿಚಾರದಲ್ಲಿ ಮಾತ್ರ ಸೀಮಿತವಾದಂತೆ ಕಾಣುತ್ತವೆ. ಆದುದರಿಂದ ಅಂತಹ ಅಪರೂಪದ ಹಾಗೂ ಅಪ್ರಚಲಿತದಲ್ಲಿರುವ ಹಿಂದೂಸ್ತಾನಿ ರಾಗವನ್ನು ಜನರಿಗೆ ಪರಿಚಯಿಸಿ, ಅವುಗಳನ್ನೂ ಪ್ರಚಲಿತ ರಾಗವನ್ನಾಗಿ ಪರಿವರ್ತಿಸಬೇಕು ಎಂಬ ಮಹತ್ವಾಕಾಂಕ್ಷೆಯೊಂದಿಗೆ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಮುಕ್ತ ಪ್ರವೇಶ ಇದ್ದು, ಸಂಗೀತಾಸಕ್ತರು, ಸಂಗೀತ ಶಿಕ್ಷಕರು, ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದ್ದಾರೆ.