ಚಿತ್ರದುರ್ಗದ ರೇಣುಕಾ ಸ್ವಾಮಿ ಹತ್ಯೆ ಪ್ರಕರಣ.

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣವನ್ನು ಮುಚ್ಚಿಹಾಕಲು ಆರೋಪಿ, ನಟ ದರ್ಶನ್ 30 ಲಕ್ಷ ರೂ. ನೀಡಿರುವುದಾಗಿ ಸ್ವ ಇಚ್ಛೆ ಹೇಳಿಕೆ ನೀಡಿದ್ದಾರೆ.

ರೇಣುಕಾ ಸ್ವಾಮಿಯ ಶವವನ್ನು ವಿಲೇವಾರಿ ಮಾಡಿ, ಈ ಪ್ರಕರಣದಲ್ಲಿ ತನ್ನ ಹೆಸರು ಎಲ್ಲಿಯೂ ಬರದಂತೆ ಮಾಡಬೇಕು. ಪೊಲೀಸರು, ಲಾಯರ್ ಮತ್ತು ಶವ ಸಾಗಿಸುವ ವ್ಯಕ್ತಿಗಳಿಗೆ ತಗಲುವ ವೆಚ್ಚವನ್ನು ಭರಿಸಲು 30 ಲಕ್ಷ ರೂ. ಹಣ ನೀಡಿರುವುದಾಗಿ ಪೊಲೀಸರ ವಿಚಾರಣೆ ವೇಳೆ ದರ್ಶನ್ ಸ್ವ ಇಚ್ಛೆ ಹೇಳಿಕೆ ನೀಡಿದ್ದಾರೆ. ಪೊಲೀಸರು ಈ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ.

ಇನ್ನು ದರ್ಶನ್ ಅವರು ಪಟ್ಟಣಗೆರೆಯ ಶೆಡ್‌ನಲ್ಲಿ ರೇಣುಕಾ ಸ್ವಾಮಿ ಮೇಲೆ ನಡೆದ ಹಲ್ಲೆಯಲ್ಲಿ ತಾನು ಭಾಗಿಯಾಗಿರುವುದಾಗಿ ಒಪ್ಪಿಕೊಂಡಿಲ್ಲ. ಆದರೆ ಶೆಡ್ ಸಮೀಪದ ಸಿಸಿಟಿವಿ ಕ್ಯಾಮೆರಾಗಳು ಕೊಲೆ ನಡೆದ ರಾತ್ರಿ ದರ್ಶನ್ ಶೆಡ್ ಕಡೆಗೆ ತನ್ನ ಜೀಪಿನಲ್ಲಿ ಆಗಮಿಸಿದ್ದನ್ನು ತೋರಿಸಿವೆ. ಜೊತೆಗೆ ರೇಣುಕಾ ಸ್ವಾಮಿ ಹತ್ಯೆ ಬಳಿಕ ದರ್ಶನ್ ಆರೋಪಿಗಳೊಂದಿಗೆ ಪಾರ್ಟಿ ಮಾಡಿರುವುದು ಪ್ರತ್ಯಕ್ಷದರ್ಶಗಳಿಂದ ತಿಳಿದುಬಂದಿದೆ. ಪಟ್ಟಣಗೆರೆಯ ಶೆಡ್‌ನಲ್ಲಿದ್ದ ಸಿಸಿಟಿವಿ ಸಾಕ್ಷಿಗಳನ್ನು ಆರೋಪಿಗಳು ನಾಶಪಡಿಸಿದ್ದಾರೆ ಎಂದು ತಿಳಿದುಬಂದಿದೆ.