ಉಡುಪಿ: ನಾಡಿನಲ್ಲಿ ಗೋವುಗಳ ಮೇಲೆ ನಡೆಯುತ್ತಿರುವ ಗೋವಧೆ , ಗೋವಿನ ಮೇಲಿನ ಕ್ರೌರ್ಯಗಳ ಸಮಾಪ್ತಿಗೆ ಸರ್ಕಾರಗಳ ಬದಲಾಗಿ ಭಗವಂತನಿಗೇ ಮೊರೆ ಹೋಗುವ ನಿಟ್ಟಿನಲ್ಲಿ ಪೇಜಾವರ ಶ್ರೀಗಳು ಒಂದು ವಾರ ಪರ್ಯಂತ ವಿಷ್ಣು ಸಹಸ್ರನಾಮಪಾರಾಯಣ ಮತ್ತು ಶಿವ ಪಂಚಾಕ್ಷರ ಜಪಾನುಷ್ಠಾನಕ್ಕೆ ಕರೆ ನೀಡಿದ್ದರು.
ಬುಧವಾರ ಅಭಿಯಾನ ಸಮಾಪ್ತಿಯ ಹಿನ್ನೆಲೆಯಲ್ಲಿ ಸುಮಾರು 27 ಕಡೆಗಳಲ್ಲಿ ವಿಷ್ಣು ಸಹಸ್ರನಾಮ ಹೋಮ ಮತ್ತು ಶಿವ ಪಂಚಾಕ್ಷರ ಹವನ ನಡೆಸಿ ದೇವರಿಗೆ ಪ್ರಾರ್ಥನೆ ಸಲ್ಲಿಸಲಾಗಿದೆ .
ಈ ಬಗ್ಗೆ ಸಂದೇಶ ನೀಡಿರುವ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ನಾಡಿನ 70 ಕ್ಕೂ ಅಧಿಕ ಮಠಾಧೀಶರು , ಸಾಧು ಸಂತರು ಈ ಅಭಿಯಾನದಲ್ಲಿ ತಾವೂ ಮುಂದೆ ನಿಂತು ಜನರಿಗೆ ಕರೆ ನೀಡಿದ್ದರಿಂದ ಅಭಿಯಾನ ಬಹಳ ಚೆನ್ನಾಗಿ ನಡೆದಿದೆ . ಇದಕ್ಕಾಗಿ ಎಲ್ಲ ಮಠಾಧೀಶರುಗಳಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ್ದಾರೆ .

ಶ್ರೀ ಮಠಕ್ಕೆ ಬಂದ ಮಾಹಿತಿಯಂತೆ ನಾಡಿನ ಬೇರೆ ಬೇರೆ ಕಡೆಗಳಲ್ಲಿ 620 ಕಡೆಗಳಲ್ಲಿ ಒಂದು ವಾರದ ಪಾರಾಯಣ ಅಭಿಯಾನ ನಡೆದಿದೆ . ಕಳೆದ ಭಾನುವಾರದ ದಿನ 117 ಕಡೆಗಳಲ್ಲಿ ಒಂದು ದಿನದ ಸಾಮೂಹಿಕ ಮಂತ್ರಾನುಷ್ಠಾನ ಮತ್ತು ಸಹಸ್ರಾರು ಮನೆಗಳಲ್ಲಿ ಭಕ್ತರು ವೈಯಕ್ತಿಕವಾಗಿ ಒಂದು ವಾರ ಪಾರಾಯಣ ಹಾಗೂ ಹಲವೆಡೆ ಬುಧವಾರ ಹೋಮ ನಡೆಸಿ ಸಮಾಪ್ತಿಗೊಳಿಸಿರುತ್ತಾರೆ . ಇನ್ನೂ ಹಲವೆಡೆ ಹೋಮ ನಡೆಯೋದು ಬಾಕಿ ಇದ್ದು ಅವರೂ ಮಾಡುವವರಿದ್ದಾರೆ .
ಈ ಮಂತ್ರಾನುಷ್ಠಾನ ಅಭಿಯಾನದ ಫಲವಾಗಿ ದೇಶದ ಗೋವಂಶಕ್ಕೆ ಸುರಕ್ಷೆ , ಶ್ರೇಯಸ್ಸು ಹಾಗೂ ಭಾಗವಹಿಸಿದ ಸರ್ವರಿಗೂ ದೇವರ ಕೃಪೆ , ನಾಡಿನಲ್ಲಿ ಶಾಂತಿ ಸುಭಿಕ್ಷೆಯಾಗಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದ್ದಾರೆ.
