ಗುಡ್ಡ ಕುಸಿತಗೊಂಡಿರುವ ಸೋಮೇಶ್ವರಕ್ಕೆ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಭೇಟಿ

ಉಡುಪಿ: ಗುಡ್ಡ ಕುಸಿತದ ಆತಂಕದಲ್ಲಿರುವ ಬೈಂದೂರು ತಾಲೂಕಿನ ಸೋಮೇಶ್ವರಕ್ಕೆ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು.ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವರು, ಜಿಲ್ಲೆಯಲ್ಲಿ ಮಳೆಯಿಂದ ಹಾನಿಯಾದ ಪ್ರದೇಶಗಳಿಗೆ ತೆರಳಿ ವೀಕ್ಷಣೆ ಮಾಡಿದ್ದೇನೆ. ಬಿಜೂರಿನಲ್ಲಿ ಸಂಪೂರ್ಣ ಕುಸಿತವಾದ ಮನೆ ನೋಡಿ ಬಂದಿದ್ದೇನೆ. ಸರ್ಕಾರದ ವತಿಯಿಂದ ಪರಿಹಾರ ಆದೇಶದ ಪ್ರತಿ ನೀಡಿದ್ದೇನೆ. ನಾಳೆ ಬೆಳಿಗ್ಗೆ ಅವರ ಖಾತೆಗೆ ಹಣ ಬರುತ್ತೆ ಎಂದು ಭರವಸೆ ನೀಡಿದರು.

ಸೋಮೇಶ್ವರದ ಗುಡ್ಡ ಕುಸಿತ ಪ್ರದೇಶಕ್ಕೆ ಬಂದಿದ್ದೇನೆ. ಸ್ಥಳೀಯರ ಜೊತೆ ಮಾತನಾಡಿದ್ದೇನೆ. ಜಿಲ್ಲೆಯಲ್ಲಿ ಅನೇಕ ರಸ್ತೆಗಳು ಹಾಳಾಗಿವೆ. ಕಡಲು ಕೊರೆತ, ಬೆಳೆ ಹಾನಿ ವಿವರ ಸಂಗ್ರಹಿಸಲು ಜಿಲ್ಲಾಡಳಿತಕ್ಕೆ ಸೂಚನೆ ಕೊಟ್ಟಿದ್ದೇನೆ. ಆದಷ್ಟು ಬೇಗ ಸರ್ಕಾರಕ್ಕೆ ಮಾಹಿತಿ ನೀಡುವಂತೆ ಹೇಳಿದ್ದೇನೆ. ಹಾಳಾದ ರಸ್ತೆಗಳನ್ನು ಆದ್ಯತೆಯ ಮೇಲೆ ದುರಸ್ತಿ ಪಡಿಸಲಾಗುವುದು ಎಂದರು.

ಖಾಸಗಿ ರೆಸಾರ್ಟ್ ನಿಂದ ಸಮಸ್ಯೆ ವಿಚಾರಕ್ಕೆ ಉತ್ತರಿಸಿದ ಅವರು, ಸರ್ಕಾರದ ಕಾಯ್ದೆ ಕಾನೂನಿನ ಚೌಕಟ್ಟಿನಲ್ಲಿ ಕಟ್ಟುತ್ತಿದ್ದಾರಾ ಎಂದು ಕೇಳಿದೆ. ಸರ್ಕಾರದ ವತಿಯಿಂದ ಎಲ್ಲಾ ರೀತಿಯ ಅನುಮತಿ ಪಡೆದಿದ್ದಾರೆ. ಕಾನೂನು ಬಾಹಿರವಾಗಿ ಏನಾದರೂ ಮಾಡಿದರೆ ತಕ್ಷಣ ಕ್ರಮ ಕೈಗೊಳ್ಳಲು ಸೂಚಿಸುತ್ತೇನೆ ಎಂದು ತಿಳಿಸಿದರು.