ಗುಜರಾತ್ ನಲ್ಲಿ ರಾತ್ರಿ ವೇಳೆ ಮನೆಯೊಳಗೆ ಬಂದ ಸಿಂಹ…ಪ್ರಾಣ ಉಳಿಸಿಕೊಳ್ಳಲು ಮನೆಯಿಂದ ಓಡಿ ಹೋದ ಕುಟುಂಬಸ್ಥರು

ಅಹಮದಾಬಾದ್: ಕಾಡಿನಿಂದ ನಾಡಿಗೆ ಬಂದ ಸಿಂಹವೊಂದು ಮನೆಯೊಳಗೆ ಆಗಮಿಸಿ ಸುಮಾರು ಎರಡು ಗಂಟೆಗಳ ಕಾಲ ಮನೆಯವರ ನಿದ್ದೆಗೆಡಿಸಿದ್ದಲ್ಲದೇ, ತಮ್ಮ ಜೀವ ಉಳಿಸಿಕೊಳ್ಳಲು ಮನೆಯಿಂದ ಹೊರಗೆ ಓಡಿಹೋದ ಘಟನೆ ಗುಜರಾತ್‌ ನಲ್ಲಿ ನಡೆದಿದೆ.

ಮುಲುಭಾಯ್‌ ರಾಮ್‌ ಭಾಯ್‌ ಲಖ್ನೋತ್ರಾ ಅವರ ಕುಟುಂಬವು ಕೋವಾಯ ಗ್ರಾಮದ ಮನೆಯಲ್ಲಿ ನಿದ್ರಿಸುತ್ತಿದ್ದ ವೇಳೆಯಲ್ಲಿ ಸಿಂಹ ತೆರೆದಿದ್ದ ಛಾವಣಿಯಿಂದ ಒಳಗೆ ನುಸುಳಿರುವುದಾಗಿ ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

ತೆರೆದ ಛಾವಣಿಯಿಂದ ಒಳಬಂದ ಸಿಂಹ ಅಡುಗೆ ಮನೆಯ ಗೋಡೆಯ ಮೇಲೆ ಕುಳಿತು ಗೋಡೆಯನ್ನು ಪರಚಲು ಪ್ರಾರಂಭಿಸಿತ್ತು. ಈ ಶಬ್ದದಿಂದ ಬೆಚ್ಚಿಬಿದ್ದ ಮನೆಯವರು ಎದ್ದು ಬಂದು ನೋಡಿದಾಗ ಸಿಂಹ ಕುಳಿತಿರುವುದನ್ನು ಕಂಡು ದಂಗಾಗಿ ಬಿಟ್ಟಿದ್ದರು. ಜೀವಭಯದಿಂದ ಹೊರಗೋಡಿ ಬಂದ ಕುಟುಂಬ ಸದಸ್ಯರು ಸ್ಥಳೀಯರಿಗೆ ಸುದ್ದಿ ಮುಟ್ಟಿಸಿದ್ದರು.ಟಾರ್ಚ್ ನೊಂದಿಗೆ ಆಗಮಿಸಿದ ಸ್ಥಳೀಯರು ಸಿಂಹದ ಮುಖಕ್ಕೆ ಬೆಳಕನ್ನು ಬಿಟ್ಟು ಓಡಿಸಲು ಪ್ರಯತ್ನಿಸಿದ್ದರು. ಆದರೆ ಗಂಭೀರವಾಗಿ ಕುಳಿತಿದ್ದ ಸಿಂಹ ಮೊಬೈಲ್‌ ಕ್ಯಾಮರಾವನ್ನೇ ದಿಟ್ಟಿಸಿ ನೋಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.ಸುಮಾರು ಎರಡು ಗಂಟೆಗಳ ಕಾಲ ಸ್ಥಳೀಯರನ್ನು ಹಾಗೂ ಮನೆಯವರನ್ನು ಸತಾಯಿಸಿ, ಕೊನೆಗೂ ಸಿಂಹವನ್ನು ಓಡಿಸುವಲ್ಲಿ ಯಶಸ್ವಿಯಾಗಿರುವುದಾಗಿ ವರದಿ ತಿಳಿಸಿದೆ. ಆದರೆ ಘಟನೆಯಲ್ಲಿ ಯಾರಿಗೂ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ವರದಿ ವಿವರಿಸಿದೆ.