ಖರ್ಗೆ ಹೇಳಿದ ತಕ್ಷಣ ಕುಂಭಮೇಳಕ್ಕೆ ಹೋಗುವವರನ್ನು ನಿಲ್ಲಿಸಲು ಸಾಧ್ಯವಿಲ್ಲ

ಉಡುಪಿ: ಖರ್ಗೆಯವರು ಹೇಳಿದ ತಕ್ಷಣ ಕುಂಭಮೇಳಕ್ಕೆ ಹೋಗುವವರನ್ನು ನಿಲ್ಲಿಸಲು ಸಾಧ್ಯವಿಲ್ಲ. ಕುಂಭಮೇಳಕ್ಕೆ ಹೋಗುವವರು ಮುಕ್ತವಾಗಿದ್ದಾರೆ. ಎಲ್ಲರೂ ಹೋಗುತ್ತಿದ್ದಾರೆ. ಇದರಲ್ಲಿ ಏನೂ ಗೊಂದಲ ಆಗಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ಕುಂಭಮೇಳ ಕುರಿತು ಖರ್ಗೆ ಹೇಳಿಕೆ ಹಾಗೂ ಡಿಕೆಶಿ ಭಾಗಿ ವಿಚಾರಕ್ಕೆ ಸಂಬಂಧಿಸಿ ಉಡುಪಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ‌ ಅವರು, ಖರ್ಗೆ ಅವರದ್ದು ವೈಯಕ್ತಿಕ ಅಭಿಪ್ರಾಯ. ಅವರ ವರ್ಷನ್ ಅವರು ಹೇಳಿದ್ದಾರೆ. ಇವರ ವರ್ಷನ್ ಇವರು ಹೇಳಿದ್ದಾರೆ. ಇದರಲ್ಲಿ ಯಾವುದೇ ಗೊಂದಲ ಇಲ್ಲ. ಭಕ್ತಿ ಇದ್ದವರು ಹೋಗಿಯೇ ಹೋಗುತ್ತಾರೆ. ಮಂಗಳೂರಿಂದಲೂ ರೈಲು ಹೊರಟಿದ್ದು, ನಮ್ಮ ಕಾಂಗ್ರೆಸ್ ಕಾರ್ಯಕರ್ತರು ಕುಂಭಮೇಳಕ್ಕೆ ಹೊರಟಿದ್ದಾರೆ. ಜನಸಂದಣಿ ಕಡಿಮೆಯಾಗಲಿ, ಆಮೇಲೆ ನಾನು ಹೋಗಿ ಬರ್ತೀನಿ. ಈಗ ಬಹಳ ರಷ್ ಇದೆ ಎಂದರು.

ಮಂಗಳೂರಿನಿಂದ ಹೊರಟವರಲ್ಲಿ 50 ಪರ್ಸೆಂಟ್ ಕಾಂಗ್ರೆಸಿನವರೇ ಇದ್ದಾರೆ. ಅದೇನು ಒಂದೇ ಪಕ್ಷಕ್ಕೆ ಸೀಮಿತವಾದ ಆಚರಣೆ ಅಲ್ಲ, ಯಾರ ಭಕ್ತಿಗೂ ನಾವು ಅಡ್ಡಿಪಡಿಸಲು ಹೋಗಲ್ಲ. ಜನರ ಭಕ್ತಿ ಪ್ರೀತಿ ವಿಶ್ವಾಸಕ್ಕೆ ಸಂಬಂಧಪಟ್ಟ ವಿಷಯವಾಗಿದೆ ಎಂದು ಹೇಳಿದರು.