ಕೋಲ್ಕತಾ: ಜಾಗತಿಕ ಕ್ರಿಕೆಟಿನ ಅತ್ಯಂತ ಶ್ರೀಮಂತ ಹಾಗೂ ಅತ್ಯಧಿಕ ಮಂದಿ ವೀಕ್ಷಿಸುವ ಟಿ20 ಲೀಗ್ ಐಪಿಎಲ್‌ಗೆ ಈಗ ಹದಿನೆಂಟರ ನಂಟು. ಇದರ ಹವಾ ಈಗಾಗಲೇ ಬೀಸಲಾರಂಭಿಸಿದ್ದು, ಶನಿವಾರದಿಂದ ತೀವ್ರಗೊಳ್ಳಲಿದೆ. 2025ರ ಆವೃತ್ತಿಗೆ ಕೋಲ್ಕತಾದ “ಈಡನ್ ಗಾರ್ಡನ್ಸ್’ನಲ್ಲಿ ಚಾಲನೆ ಲಭಿಸಲಿದೆ. ಹಾಲಿ ಚಾಂಪಿಯನ್ ಕೋಲ್ಕತಾ ನೈಟ್‌ರೈಡರ್ ಮತ್ತು ಇನ್ನೂ ಕಪ್ ಗೆಲ್ಲದ ರಾಯಲ್ ಚಾಲೆಂಜರ್ ಬೆಂಗಳೂರು ತಂಡಗಳು ಆರಂಭಿಕ ಪಂದ್ಯದಲ್ಲಿ ಮುಖಾಮುಖೀ ಆಗಲಿವೆ.
ಎಂದಿನಂತೆ ಇದು ಎರಡು ತಿಂಗಳ ಸುದೀರ್ಘ ಕ್ರಿಕೆಟ್ ಜಾತ್ರೆ. ಈ ಬಾರಿ 65 ದಿನಗಳ ಕಾಲ ಸಾಗಲಿದೆ. ದೇಶದ 13 ತಾಣಗಳಲ್ಲಿ ಒಟ್ಟು 74 ಪಂದ್ಯಗಳನ್ನು ಆಡಲಾಗುವುದು. ಇದರಲ್ಲಿ 12 ಡಬಲ್ ಹೆಡರ್ ಪಂದ್ಯಗಳಿವೆ. ಮುಂದಿನೆರಡು ಋತುವಿನಲ್ಲಿ ಪಂದ್ಯಗಳ ಸಂಖ್ಯೆ 84ಕ್ಕೆ ಏರಲಿದೆ.

ಬಹಳಷ್ಟು ಬದಲಾವಣೆ:
ಈ ಬಾರಿಯ ಐಪಿಎಲ್, ಆರಂಭದಲ್ಲಿ ಒಂದಿಷ್ಟು ಗೊಂದಲಕ್ಕೆ ಕಾರಣವಾಗಬಹುದು. ಅದೇ 10 ತಂಡಗಳು ಭಾಗವಹಿಸುವುದಾದರೂ ಬಹುತೇಕ ತಂಡಗಳ ನಾಯಕರು ಬದಲಾಗಿದ್ದಾರೆ, ಕೆಲವು ಆಟಗಾರರು ಬೇರೆ ಬೇರೆ ಫ್ರಾಂಚೈಸಿಗಳ ಪಾಲಾಗಿದ್ದಾರೆ, ಒಂದಿಷ್ಟು ನೂತನ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಇವೆಲ್ಲವೂ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ನ ಟಿ20 ನಿಯಮಾನುಸಾರವಿದೆ. ಇಷ್ಟು ಕಾಲ ಐಪಿಎಲ್‌ನದ್ದೇ ಪ್ರತ್ಯೇಕ ನಿಯಮಾವಳಿ ಇರುತ್ತಿತ್ತು. ಆದರೆ ಇದರಿಂದ ಪಂದ್ಯಾವಳಿಯ ರೋಮಾಂಚನಕ್ಕೆ, ಜೋಶ್ ಮತ್ತು ಕ್ರೇಝ್ಗೆ ಯಾವುದೇ ಕೊರತೆ ಕಾಡದು.
ಎರಡು ಗ್ರೂಪ್‌ಗಳು:
10 ತಂಡಗಳನ್ನು 2 ಗ್ರೂಪ್‌ಗಳಾಗಿ ವಿಂಗಡಿಸಲಾಗಿದೆ. “ಎ’ ವಿಭಾಗದಲ್ಲಿ ಚೆನ್ನೈ, ಕೆಕೆಆರ್, ರಾಜಸ್ಥಾನ್, ಆರ್‌ಸಿಬಿ ಮತ್ತು ಪಂಜಾಬ್ ತಂಡಗಳಿವೆ. “ಬಿ’ ವಿಭಾಗದಲ್ಲಿ ಮುಂಬೈ, ಹೈದರಾಬಾದ್, ಗುಜರಾತ್, ಡೆಲ್ಲಿ ಮತ್ತು ಲಕ್ನೋ ಸ್ಥಾನ ಪಡೆದಿವೆ. ಪ್ರತಿಯೊಂದು ತಂಡ ಲೀಗ್ ಹಂತದಲ್ಲಿ 14 ಪಂದ್ಯಗಳನ್ನು ಆಡಲಿದೆ. ಇದರಲ್ಲಿ ತನ್ನದೇ ಗುಂಪಿನ ತಂಡಗಳ ವಿರುದ್ಧ ತಲಾ 2 ಪಂದ್ಯ, ಎದುರಾಳಿ ಗುಂಪಿನ ಒಂದು ತಂಡದೊಂದಿಗೆ 2 ಪಂದ್ಯ ಹಾಗೂ ಉಳಿದ 4 ತಂಡಗಳ ವಿರುದ್ಧ ಒಂದೊಂದು ಪಂದ್ಯ ಆಡಲಿದೆ.
ಅಗ್ರ 4 ತಂಡಗಳು ಪ್ಲೇ ಆಫ್ ಪ್ರವೇಶಿಸಲಿವೆ. ಪ್ಲೇ ಆಫ್ ಸುತ್ತಿನಲ್ಲಿ ಎಂದಿನಂತೆ 2 ಕ್ವಾಲಿಫೈಯರ್ ಪಂದ್ಯ, ಒಂದು ಎಲಿಮಿನೇಟರ್ ಪಂದ್ಯ ಇರಲಿದೆ. ಅಗ್ರ 2 ತಂಡಗಳು ಮೊದಲ ಕ್ವಾಲಿಫೈಯರ್ ಆಡಲಿದ್ದು, ಗೆದ್ದ ತಂಡ ನೇರವಾಗಿ ಫೈನಲ್ ತಲುಪಲಿದೆ. 3-4ನೇ ಸ್ಥಾನ ಪಡೆದ ತಂಡಗಳು ಎಲಿಮಿನೇಟರ್‌ನಲ್ಲಿ ಸ್ಪರ್ಧಿಸಲಿದ್ದು, ಸೋತ ತಂಡ ಹೊರಬೀಳುತ್ತದೆ. ವಿಜೇತ ತಂಡ ಮೊದಲ ಕ್ವಾಲಿಫೈಯರ್‌ನಲ್ಲಿ ಸೋತ ತಂಡದ ವಿರುದ್ಧ ಆಡಲಿದೆ. ಇಲ್ಲಿ ಗೆದ್ದ ತಂಡ ಪ್ರಶಸ್ತಿ ಸುತ್ತು ಪ್ರವೇಶಿಸಲಿದೆ. ಮೇ 25ರಂದು ಕೋಲ್ಕತಾದ ಈಡನ್ ಗಾರ್ಡನ್ಸ್‌ನಲ್ಲೇ ಫೈನಲ್ ಏರ್ಪಡಲಿದೆ.
ಎಲ್ಲವೂ ನೆಚ್ಚಿನ ತಂಡಗಳೇ:
ಮೇಲ್ನೋಟಕ್ಕೆ ಈ ಕೂಟದ ಎಲ್ಲ 10 ತಂಡಗಳೂ ಬಲಿಷ್ಠವಾಗಿವೆ ಮತ್ತು ಹೆಚ್ಚು ಸಮತೋಲನದಿಂದ ಕೂಡಿವೆ. ಹೀಗಾಗಿ ಇಲ್ಲಿ ಎಲ್ಲವೂ ನೆಚ್ಚಿನ ತಂಡಗಳಾಗಿಯೇ ಗೋಚರಿಸುತ್ತಿವೆ. ಆದರೆ 2008ರಿಂದಲೇ ಕಣದಲ್ಲಿದ್ದು, ಈವರೆಗೆ ಕಪ್ ಗೆಲ್ಲದ ಆರ್‌ಸಿಬಿ, ಪಂಜಾಬ್ ಮತ್ತು ಡೆಲ್ಲಿ ತಂಡಗಳಿಗೆ ಲಕ್ ಎಷ್ಟರ ಮಟ್ಟಿಗೆ ಇದೆ ಎಂಬ ಕುತೂಹಲ ದಟ್ಟವಾಗಿದೆ.
ಕಮಿನ್ಸ್, ಏಕೈಕ ವಿದೇಶಿ ನಾಯಕ:
ಈ ಬಾರಿಯ ಐಪಿಎಲ್ ತಂಡಗಳ ಸಿಂಹಪಾಲು ನಾಯಕತ್ವ ಭಾರತೀಯರಿಗೇ ಒಲಿದಿರುವುದು ವಿಶೇಷ. 9 ತಂಡಗಳು ತವರಿನ ನಾಯಕರನ್ನೇ ಹೊಂದಿವೆ. ಇವರಲ್ಲಿ ಆರ್‌ಸಿಬಿಯ ರಜತ್ ಪಾಟಿದಾರ್ ಮತ್ತು ಡೆಲ್ಲಿಯ ಅಕ್ಷರ್ ಪಟೇಲ್ ಮೊದಲ ಬಾರಿಗೆ ತಂಡವನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತಿದ್ದಾರೆ. ಹೈದರಾಬಾದ್ ತಂಡದ ಪ್ಯಾಟ್ ಕಮಿನ್ಸ್ ಏಕಮಾತ್ರ ವಿದೇಶಿ ಕ್ಯಾಪ್ಟನ್.
ಸಲೈವಾ ನಿಷೇಧ ರದ್ದು:
ಕೋವಿಡ್-19 ಬಳಿಕ ಕ್ರಿಕೆಟ್ ವಿಶ್ವದಾದ್ಯಂತ ಜಾರಿಯಲ್ಲಿದ್ದ ಸಲೈವಾ ನಿಷೇಧವನ್ನು ಈ ಬಾರಿಯ ಐಪಿಎಲ್‌ನಲ್ಲಿ ಹಿಂದಕ್ಕೆ ಪಡೆಯಲಾಗಿದೆ. ಚೆಂಡಿಗೆ ಹೊಳಪು ಮೂಡಿಸಲು ಲಾಲಾರಸವನ್ನು ಬಳಸಬಹುದಾಗಿದೆ. ಇದರಿಂದ ಬೌಲರ್‌ಗಳಿಗೆ ಸ್ವಿಂಗ್ ಸಾಧ್ಯವಾಗುತ್ತದೆ.
11ನೇ ಓವರ್ ಬಳಿಕ ಹೊಸ ಚೆಂಡು:
ದಿನವೂ ರಾತ್ರಿ ಪಂದ್ಯ ಇರುವುದರಿಂದ ಸೆಕೆಂಡ್ ಬೌಲಿಂಗ್ ನಡೆಸುವ ತಂಡಕ್ಕೆ ಇಬ್ಬನಿಯ ಕಾಟ ಎದುರಾಗುವುದು ಸಹಜ. ಇದಕ್ಕಾಗಿ 11ನೇ ಓವರ್ ಬಳಿಕ ಹೊಸ ಚೆಂಡನ್ನು ನೀಡಲು ನಿರ್ಧರಿಸಲಾಗಿದೆ. ಆದರೆ ಹಗಲು ಪಂದ್ಯಗಳಿಗೆ ಇದು ಅನ್ವಯಿಸುವುದಿಲ್ಲ.
ಇಂಪ್ಯಾಕ್ಟ್ ಪ್ಲೇಯರ್ ಇದ್ದಾರೆ:
ಕಳೆದ ಸೀಸನ್‌ನಲ್ಲಿ ಸಾಕಷ್ಟು ಚರ್ಚೆಗೆ ಕಾರಣ ವಾಗಿದ್ದ “ಇಂಪ್ಯಾಕ್ಟ್ ಪ್ಲೇಯರ್’ ನಿಯಮವನ್ನು ಮುಂದುವರಿಸಲು ನಿರ್ಧರಿಸಲಾಗಿದೆ. ಇದು 2027ರ ತನಕವೂ ಜಾರಿಯಲ್ಲಿರಲಿದೆ. ಇದರಿಂದ ಆಲ್‌ರೌಂಡರ್‌ಗಳಿಗೆ ಮಹತ್ವ ಲಭಿಸುತ್ತದೆ ಎಂಬುದೊಂದು ಸಮರ್ಥನೆ.
ಆರಂಭೋತ್ಸವಕ್ಕೆ ತಾರೆಯರ ಮೆರುಗು:
18ನೇ ಆವೃತ್ತಿಯ ಐಪಿಎಲ್ ಉದ್ಘಾಟ ನೆಯ ವೇಳೆ ತಾರೆಯರಿಂದ ವಿವಿಧ ಮನೋರಂಜನ ಕಾರ್ಯಕ್ರಮಗಳು ನಡೆಯಲಿವೆ. ಉದ್ಘಾಟನಾ ಪಂದ್ಯ ನಡೆಯುವುದಕ್ಕೂ ಮುನ್ನ, ಅಂದರೆ ಸಂಜೆ 6ರ ವೇಳೆ, ಬಾಲಿವುಡ್ ನಟಿ ದಿಶಾ ಪಟಾನಿ, ಖ್ಯಾತ ಗಾಯಕಿ ಶ್ರೇಯಾ ಘೋಷಾಲ್, ಪಂಜಾಬಿ ರ್ಯಾಪರ್ ಕರಣ್ ಅಜ್ಲಾ ಕಾರ್ಯಕ್ರಮ ನೀಡಲಿದ್ದಾರೆ. ಆರ್‌ಸಿಬಿ ತಾರೆ ವಿರಾಟ್ ಕೊಹ್ಲಿ, ಕೆಕೆಆರ್ ಮಾಲಕ ಶಾರುಖ್ ಖಾನ್ ಆಕರ್ಷಣೆಯ ಕೇಂದ್ರಬಿಂದುವಾಗಿರಲಿದ್ದಾರೆ. ಐಪಿಎಲ್ ನಡೆಯುವ ಉಳಿದ 12 ತಾಣಗಳಲ್ಲೂ ಸಣ್ಣ ಮಟ್ಟದಲ್ಲಿ ಉದ್ಘಾಟನಾ ಕಾರ್ಯಕ್ರಮಗಳು ನೆರವೇರಲಿವೆ.












