ಉಡುಪಿ: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಬ್ರಾಹ್ಮ ಮುಹೂರ್ತದಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸಕ್ಕೆ ಚಾಲನೆ ನೀಡಲಾಯಿತು.
ಲಕ್ಷ್ಮೀ, ಸರಸ್ವತಿ ಹಾಗೂ ಪಾರ್ವತಿಯ ಐಕ್ಯ ಸ್ವರೂಪಿಣಿಯಾಗಿ ನೆಲೆನಿಂತ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ವಿದ್ಯಾರಂಭ ಮಾಡಿಸಿದರೆ ಮಕ್ಕಳು ಭವಿಷ್ಯದಲ್ಲಿ ಉತ್ತಮವಾಗಿ ವಿದ್ಯೆ ಕಲಿಯುತ್ತಾರೆ ಎನ್ನುವ ನಂಬಿಕೆ ಭಕ್ತರಲ್ಲಿದೆ. ವಿಜಯದಶಮಿಯ ಶುಭ ಮುಹೂರ್ತದಲ್ಲಿ ವೈದಿಕರ ಮಾರ್ಗದರ್ಶನದ ಮೇರೆಗೆ ಪಾಲಕರು ತಮ್ಮ ಮಕ್ಕಳ ಕೈ ಹಿಡಿದು ಅಕ್ಕಿತುಂಬಿದ ಬಟ್ಟಲಿನಲ್ಲಿ ಓಂಕಾರದಿಂದ ಮೊದಲ್ಗೊಂಡು ದೇವಿಯ ಸ್ತೋತ್ರ ಹಾಗೂ ವರ್ಣ ಮಾಲೆಗಳು ಮತ್ತು ಸಂಖ್ಯೆಗಳನ್ನು ಬರೆಯಿಸಿ ಅಕ್ಷರಾಭ್ಯಾಸಕ್ಕೆ ಮುನ್ನುಡಿ ಬರೆದರು.
ನಂತರ ಪೋಷಕರು ತಮ್ಮ ಮಕ್ಕಳ ನಾಲಗೆಯ ಮೇಲೆ ಉಂಗುರದಿಂದ ಓಂಕಾರವನ್ನು ಬರೆದು ಶ್ರೀದೇವಿಯ ಆಶೀರ್ವಾದವನ್ನು ಬೇಡಿದರು. ಬಳಿಕ ದೇವಸ್ಥಾನದ ಮುಂಬಾಗದಲ್ಲಿರುವ ಧ್ವಜಕಟ್ಟೆಯಲ್ಲಿ ದೇವಿಗೆ ಪ್ರಾರ್ಥನೆ ಸಲ್ಲಿಸುವ ಮೂಲಕ ವಿದ್ಯಾರಂಭದ ವಿಧಿವಿಧಾನಗಳು ಸಾಂಗವಾಗಿ ಮುಗಿದವು. ರಾಜ್ಯ ಹಾಗೂ ನೆರೆಯ ಕೇರಳ ಹಾಗೂ ತಮಿಳುನಾಡು ರಾಜ್ಯದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವಿಯ ದರ್ಶನ ಪಡೆದು ಪುನೀತರಾದರು.