ಕೊಲ್ಲೂರು: ತೆಂಗಿನ ಮರದಿಂದ ಬಿದ್ದು ವ್ಯಕ್ತಿ ಮೃತ್ಯು

ಕೊಲ್ಲೂರು: ತೆಂಗಿನಮರದಿಂದ ತೆಂಗಿನಕಾಯಿ ಕೊಯ್ಯುವಾಗ ತೆಂಗಿನಕಾಯಿ ತಲೆಯ ಮೇಲೆ ಬಿದ್ದ ಪರಿಣಾಮ ಆಯ ತಪ್ಪಿ ಮರದಿಂದ ಬಿದ್ದ ವ್ಯಕ್ತಿಯೊಬ್ಬರು ಆಸ್ಪತ್ರೆಗೆ ಕರೆದೊಯ್ಯುವಾಗ ಮೃತಪಟ್ಟ ಘಟನೆ ಕೊಲ್ಲೂರು ಗ್ರಾಮದ ಹೆಗ್ಗಡೆಹಕ್ಲುವಿನಲ್ಲಿ ಬುಧವಾರ ಸಂಜೆ ನಡೆದಿದೆ.

ಮೃತರನ್ನು ಬೈಂದೂರಿನ ಕಾಲ್ತೋಡು ಗ್ರಾಮದ ರಾಮ ಎಂದು ಗುರುತಿಸಲಾಗಿದೆ. ಮಗಳು ಜ್ಯೋತಿ ಮನೆಯಲ್ಲಿ ಕೃಷಿ ಕೆಲಸಕ್ಕೆಂದು ವಾರದ ಹಿಂದೆ ಹೆಗ್ಗಡೆಹಕ್ಲುವಿಗೆ ಬಂದಿದ್ದ ರಾಮ ಅವರು ನಿನ್ನೆ ಸಂಜೆ 4:30ರ ಸುಮಾರಿಗೆ ತೋಟದ ತೆಂಗಿನ ಮರ ಹತ್ತಿ ಕಾಯಿ ಕೊಯ್ಯುವಾಗ ಈ ದುರ್ಘಟನೆ ನಡೆದಿದೆ.

ಮರದಿಂದ ಬಿದ್ದಾಗ ರಾಮರ ತಲೆಗೆ ತರಚಿದ ಗಾಯವಾಗಿದ್ದು, ತಕ್ಷಣ ಅವರನ್ನು ಅಂಬುಲೆನ್ಸ್‌ನಲ್ಲಿ ಕುಂದಾಪುರ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಪರೀಕ್ಷಿಸಿದ ವೈದ್ಯರು ಅವರು ಮೃತಪಟ್ಟಿರುವುದಾಗಿ ತಿಳಿಸಿದರು. ಕೊಲ್ಲೂರು ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.