ಕೇರಳ, ಜು.31: ಕೇರಳದ ವಯನಾಡಿನಲ್ಲಿ ಭಾರೀ ಭೂ ಕುಸಿತ ದುರಂತ ಸಂಭವಿಸಿದ್ದು, ಸಾವಿನ ಸಂಖ್ಯೆ 151 ಹೆಚ್ಚಾಗಿದೆ ಎಂದು ತಿಳಿದು ಬಂದಿದೆ. ಈ ಪೈಕಿ 67 ಮೃತದೇಹಗಳ ಗುರುತು ಪತ್ತೆಯಾಗಿದೆ. 191 ಮಂದಿ ಆಸ್ಪತ್ರೆಗೆ ದಾಖಲಾಗಿದ್ದು, ಈ ಪೈಕಿ ಹಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ. 3069 ಮಂದಿ ವಿವಿಧ ಸಾಂತ್ವನ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ.
ಮಣ್ಣು, ಮರದ ದಿಮ್ಮಿಗಳಡಿಯಲ್ಲಿ ಛಿದ್ರಗೊಂಡಿರುವ ಮೃತದೇಹಗಳು ಪತ್ತೆಯಾಗತೊಡಗಿದೆ.
ಬುಧವಾರ ಬೆಳಗ್ಗೆ ಮತ್ತೆ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದ್ದು ,ನಾಲ್ಕು ತಂಡಗಳಾಗಿ 150 ಮಂದಿ ಕಾರ್ಯಾಚರಣೆ ಗೆ ಇಳಿದಿದ್ದಾರೆ. ಇದರಲ್ಲಿ ಸೇನೆ, NDRF, ಅಗ್ನಿ ಶಾಮಕ ದಳ, ಆರೋಗ್ಯ ತಂಡ ಒಳಗೊಂಡಿದೆ. ಇವರಿಗೆ ಪೊಲೀಸರು, ಅರಣ್ಯ ಇಲಾಖೆ, ಸ್ವಯಂ ಸೇವಕರು ಸಾಥ್ ನೀಡಲಿದ್ದಾರೆ ಎಂದು ವಯನಾಡ್ ಜಿಲ್ಲಾಡಳಿತ ತಿಳಿಸಿದೆ. ಇನ್ನು ಹವಾಮಾನ ಪೂರಕವಾಗಿದ್ದರೆ, ವಾಯು ಸೇನೆಯ ತಂಡದಿಂದ ಹೆಲಿಕಾಪ್ಟರ್ ಮೂಲಕ ಏರ್ ಲಿಫ್ಟ್ ನಡೆಯಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಮುಂಡಕ್ಕೈ ಪ್ರದೇಶದಲ್ಲಿ ಕಾರ್ಯಾಚರಣೆ ಸಲುವಾಗಿ ಸೇನೆ ತಾತ್ಕಾಲಿಕ ಸೇತುವೆ ನಿರ್ಮಿಸಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಧ್ಯಕ್ಷತೆಯಲ್ಲಿ ಇಂದು ಬೆಳಗ್ಗೆ 9.30ಕ್ಕೆ ತುರ್ತು ಸಚಿವ ಸಂಪುಟ ಸಭೆ ನಡೆಯಲಿದೆ.












