ಪಟನಾ: ಸದಾ ಕುಡಿದು ನಿಂದಿಸುತ್ತಿದ್ದ ಗಂಡನ ತೊರೆದು ಮಹಿಳೆಯೊಬ್ಬರು ಮನೆಗೆ ಸಾಲ ವಸೂಲಿಗೆ ಬರುತ್ತಿದ್ದ ಏಜೆಂಟ್ ಜೊತೆ ಪರಾರಿಯಾಗಿ ವಿವಾಹವಾದ ಘಟನೆ ಬಿಹಾರದಲ್ಲಿ ನಡೆದಿದೆ.ಈ ವಿವಾಹಕ್ಕೆ ಏಜೆಂಟ್ ಕುಟುಂಬ ಸಮ್ಮತಿಸಿದ್ದರೆ, ಮಹಿಳೆಯ ಕುಟುಂಬ ವಿರೋಧ ವ್ಯಕ್ತಪಡಿಸಿ ಪ್ರಕರಣ ದಾಖಲಿಸಿದೆ.
ಏನಿದು ಘಟನೆ?: ಬಿಹಾರದ ಜಮುಯಿ ಜಿಲ್ಲೆಯ ನಿವಾಸಿ ನಕುಲ್ ಶರ್ಮಾರನ್ನು ಇಂದಿರಾ 2022ರಲ್ಲಿ ವಿವಾಹವಾದರು. ಆದರೆ ನಕುಲ್ ಸದಾ ಕುಡಿದು ಇಂದಿರಾಳಿಗೆ ದೈಹಿಕ, ಮಾನಸಿಕ ಹಿಂಸೆ ನೀಡುತ್ತಿದ್ದ. ನಕುಲ್ ಮನೆಗೆ ಭೇಟಿ ನೀಡುತ್ತಿದ್ದ ಹಣಕಾಸು ಕಂಪನಿಯ ಲೋನ್ ಏಜೆಂಟ್ ಪವನ್ ಕುಮಾರ್ ಇಂದಿರಾಗೆ ಭರವಸೆಯಾಗಿ ಕಾಣಿಸಿದ್ದ. ಪವನ್ ಜತೆಗಿನ ವ್ಯಾವಹಾರಿಕ ಪರಿಚಯ ಸ್ನೇಹವಾಯಿತು. ಬಳಿಕ ಇಬ್ಬರ ನಡುವೆ ಪ್ರೇಮಾಂಕುರವಾಯಿತು. ಪವನ್, ಇಂದಿರಾ ಫೆ.4ರಂದು ವಿಮಾನದಲ್ಲಿ ಪಶ್ಚಿಮ ಬಂಗಾಳದ ಆಸಾನ್ಸೋಲ್‌ಗೆ ಪರಾರಿಯಾಗಿದ್ದಳು. ಫೆ.11ಕ್ಕೆ ಹಿಂದೂ ಸಂಪ್ರದಾಯದಂತೆ ಇಬ್ಬರೂ ವಿವಾಹವಾಗಿ ಜಮುಯಿಗೆ ಮರಳಿದ್ದಾರೆ.












