ಉಡುಪಿ: ಡಿಪೋದಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್ಸೊಂದು ಡ್ರೈವರ್ ಇಲ್ಲದೆ ಚಲಿಸಿ ಸರ್ವೀಸ್ ರಸ್ತೆ ಹಾಗೂ ಹೆದ್ದಾರಿ ಬ್ಯಾರಿಕೇಡ್ ದಾಟಿ ಹೋಟೆಲೊಂದರ ಮುಂದಿದ್ದ ಕಾರಿಗೆ ಢಿಕ್ಕಿಯಾಗಿ ನಿಂತ ಘಟನೆ ಕುಂದಾಪುರ ಹೊರವಲಯದ ಹಂಗಳೂರು ಎಂಬಲ್ಲಿ ಸೋಮವಾರ ಬೆಳಿಗ್ಗೆ 7ಗಂಟೆಗೆ ನಡೆದಿದೆ.
ಬಸ್ ಶುಚಿಗೊಳಿಸಿ ಸಿಬ್ಬಂದಿ ಬಸ್ಸಿನಿಂದ ಇಳಿದಿದ್ದರು. ಇದಾದ ಬಳಿಕ ಡಿಪೋದಿಂದ ಬಸ್ಸು ಮುಂದಕ್ಕೆ ಚಲಿಸಿ ಸರ್ವೀಸ್ ರಸ್ತೆಯಿಂದ ಡಿವೈಡರ್ ದಾಟಿ ಮತ್ತೊಂದು ಸರ್ವೀಸ್ ರಸ್ತೆಗೆ ಅಡ್ಡಲಾಗಿದ್ದ ಬ್ಯಾರಿಕೇಡ್ ಮುರಿದು ಸಾಗಿ ಹೋಟೆಲೊಂದರ ಎದುರು ನಿಂತಿದ್ದ ಕಾರಿಗೆ ಢಿಕ್ಕಿಯಾಗಿದೆ.
ಹೆದ್ದಾರಿ ಹಾಗೂ ಸರ್ವೀಸ್ ರಸ್ತೆಯಲ್ಲಿ ವಾಹನಗಳು ಕಡಿಮೆ ಇದ್ದರಿಂದ ಹಾಗೂ ಪಾದಾಚಾರಿಗಳ ಓಡಾಟವಿಲ್ಲದ ಕಾರಣ ಅದೃಷ್ಟವಶಾತ್ ಭಾರೀ ಅವಘಡ ತಪ್ಪಿದೆ. ಘಟನೆ ದೃಶ್ಯಾವಳಿ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಕುಂದಾಪುರ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.