ಉಡುಪಿ: ಕಾರ್ಕಳ ವಿಧಾನಸಭಾ ಕ್ಷೇತ್ರದ ಸುಮಾರು 250 ಕಿಂಡಿ ಅಣೆಕಟ್ಟುಗಳು ಸೇರಿದಂತೆ ಉಡುಪಿ ಜಿಲ್ಲೆಯ ಕಿಂಡಿ ಅಣೆಕಟ್ಟುಗಳಿಗೆ ಹಲಗೆ ಅಳವಡಿಸಲು ಅನುದಾನ ನೀಡಲು ರಾಜ್ಯ ಕಾಂಗ್ರೆಸ್ ಸರಕಾರದ ಬಳಿ ಹಣವಿಲ್ಲ. ಕೃಷಿಕರಿಗೆ ಸರಕಾರ ದ್ರೋಹ ಬಗೆಯುವ ಮೂಲಕ ರೈತರ ಬೆನ್ನಿಗೆ ಇರಿದಿದೆ ಎಂದು ರಾಜ್ಯ ಬಿಜೆಪಿ ಘಟಕ ಪ್ರಧಾನ ಕಾರ್ಯದರ್ಶಿ ಹಾಗೂ ಕಾರ್ಕಳ ಶಾಸಕರಾದ ವಿ. ಸುನಿಲ್ ಕುಮಾರ್ ರಾಜ್ಯ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಿಂಡಿ ಅಣೆಕಟ್ಟುಗಳಿಗೆ ಹಲಗೆಗಳನ್ನು ಅಳವಡಿಸಲು ರಾಜ್ಯ ಸರಕಾರದಿಂದ ಈವರೆಗೆ ಯಾವುದೇ ಅನುದಾನ ಬಿಡುಗಡೆ ಮಾಡಿಲ್ಲ ಎಂದಿರುವ ಅವರು ಸಣ್ಣ ನೀರಾವರಿ ಇಲಾಖೆಯ ಸಚಿವರು ಹಾಗೂ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ಪತ್ರ ಬರೆದು ಅನುದಾನ ಬಿಡುಗಡೆಗೆ ಆಗ್ರಹಿಸಿದ್ದರು, ಈವೆರೆಗೆ ಸರಕಾರದಿಂದ ಯಾವುದೇ ಅನುದಾನ ಬಿಡುಗಡೆಯಾಗಿರುವುದಿಲ್ಲ ಎಂದಿರುವ ಅವರು ಸಕಾಲದಲ್ಲಿ ಎಲ್ಲಾ ಕಿಂಡಿ ಅಣೆಕಟ್ಟುಗಳಿಗೆ ಹಲಗೆ ಅಳವಡಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿರುತ್ತಾರೆ.
ಕಾರ್ಕಳ ವಿಧಾಸನಭಾ ಕ್ಷೇತ್ರದ ಕಾರ್ಕಳ ಹಾಗೂ ಹೆಬ್ರಿ ತಾಲೂಕು ವ್ಯಾಪ್ತಿಯಲ್ಲಿ ಸುಮಾರು 250 ಕ್ಕೂ ಹೆಚ್ಚು ಕಿಂಡಿ ಅಣೆಕಟ್ಟುಗಳಿದ್ದು, ಅವುಗಳನ್ನು ಸಣ್ಣ ನೀರಾವರಿ ಇಲಾಖೆ ಮುಖಾಂತರ ನಿರ್ವಹಿಸಲಾಗುತ್ತಿದೆ. ನದಿಗಳಿಗೆ ಪೂರಕವಾಗಿ ಕಿಂಡಿ ಅಣೆಕಟ್ಟುಗಳನ್ನು ನಿರ್ಮಾಣ ಮಾಡಲಾಗಿದ್ದು, ಪ್ರತಿವರ್ಷ ಕಿಂಡಿ ಅಣೆಕಟ್ಟುಗಳಲ್ಲಿ ಸಂಗ್ರಹವಾಗುವ ನೀರಿನ ಮುಖಾಂತರ ಅಲ್ಲಿನ ಅಚ್ಚುಕಟ್ಟು ಪ್ರದೇಶದ ರೈತರು ಋತುಕಾಲಿಕ ಹಾಗೂ ಧೀರ್ಘಕಾಲೀನ ಕೃಷಿ ಬೆಳೆಗಳಿಗೆ ನೀರನ್ನು ಒದಗಿಸುವ ಜತೆಗೆ ಆ ಪರಿಸರದ ಇತರ ನೀರಿನ ಮೂಲಗಳಿಗೆ ಪ್ರಮುಖ ಆಸರೆಯಾಗಿದೆ. ಸದರಿ ಕಿಂಡಿ ಅಣೆಕಟ್ಟುಗಳ ಅಚ್ಚುಕಟ್ಟು ಪ್ರದೇಶದ ಕೃಷಿಕರು ಬಹಳ ದೊಡ್ಡ ಪ್ರಮಾಣದಲ್ಲಿ ಕಿಂಡಿ ಅಣೆಕಟ್ಟಿನ ನೀರಿನ ಮೇಲೆ ಅವಲಂಬಿತರಾಗಿದ್ದಾರೆ.
ಪ್ರಸ್ತುತ ಮಳೆಗಾಲ ಮುಗಿದಿದ್ದು, ನೀರಿನ ಹರಿವು ಕಡಿಮೆ ಆಗುತ್ತಿದ್ದು, ತಕ್ಷಣದಲ್ಲಿ ಕಿಂಡಿ ಅಣೆಕಟ್ಟುಗಳಿಗೆ ಹಲಗೆಗಳನ್ನು ಅಳವಡಿಸದಿದ್ದಲ್ಲಿ, ಸಂಗ್ರಹವಾಗುವ ನೀರಿನ ಪ್ರಮಾಣ ಕಡಿಮೆಯಾಗಿ ಮುಂದಿನ ದಿನಗಳಲ್ಲಿ, ಬೇಸಿಗೆ ಸಂದರ್ಭದಲ್ಲಿ ಕೃಷಿ ಹಾಗೂ ಇನ್ನಿತರ ಚಟುವಟಿಕೆಗಳಿಗೆ ನೀರಿನ ಕೊರತೆ ಉಂಟಾಗುವ ಸಂಭವ ಇರುತ್ತದೆ.
ಅನುದಾನದ ಕೊರತೆಯಿಂದಾಗಿ ಕಿಂಡಿ ಅಣೆಕಟ್ಟುಗಳಿಗೆ ಸೂಕ್ತ ಸಮಯದಲ್ಲಿ ಹಲಗೆಗಳನ್ನು ಅಳವಡಿಸದಿದ್ದಲ್ಲಿ, ಸ್ಥಳೀಯ ರೈತರೇ ಮುಂದಿನ ದಿನಗಳಲ್ಲಿ ಕಿಂಡಿ ಅಣೆಕಟ್ಟುಗಳ ನಿರ್ವಹಣೆಗೆ ಪರ್ಯಾಯ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕಾದ ಅನಿವಾರ್ಯತೆ ಬರಬಹುದು ಆದುದರಿಂದ ಕಾರ್ಕಳ ವಿಧಾನಸಭಾ ಕ್ಷೇತ್ರ ಸೇರಿದಂತೆ ಉಡುಪಿ ಜಿಲ್ಲೆಯ ಎಲ್ಲಾ ಕಿಂಡಿ ಅಣೆಕಟ್ಟುಗಳಿಗೆ ಆದಷ್ಟು ಶೀಘ್ರವಾಗಿ ಹಲಗೆಗಳನ್ನು ಅಳವಡಿಸಲು ಸೂಕ್ತ ಅನುದಾನ ಬಿಡುಗಡೆ ಮಾಡುವಂತೆ ಸರಕಾರಕ್ಕೆ ಅವರು ಒತ್ತಾಯಿಸಿದ್ದಾರೆ.