ಕಾರ್ಕಳ: ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ – ಶಾಲಾ ಮುಖ್ಯ ಶಿಕ್ಷಕನ ಬಂಧನ

ಉಡುಪಿ: ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪದಡಿ ಮುಖ್ಯ ಶಿಕ್ಷಕನನ್ನು ಕಾರ್ಕಳ ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಬೋಳ ವಂಜಾರಕಟ್ಟೆ ನಿವಾಸಿ ಬರಬೈಲು ಶಾಲೆಯ ಮುಖ್ಯ ಶಿಕ್ಷಕ ಹಾಗೂ ವಂಜಾರಕಟ್ಟೆ ಇಲ್ನೋಡಿ ಮಹಾಲಿಂಗೇಶ್ವರ ದೇವಳದ ಪ್ರಧಾನ ಅರ್ಚಕ ರಾಜೇಂದ್ರ ಆಚಾರ್ (58) ಬಂಧಿತ ಆರೋಪಿ.

ಈತ ಪ್ರಾಥಮಿಕ ಶಾಲೆಯ ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ನಿರಂತರ ಲೈಂಗಿಕ ಕಿರುಕುಳ ನೀಡುತ್ತಿದ್ದ. ಈ ಬಗ್ಗೆ ಅನೇಕ ದೂರಿಗಳಿದ್ದು, ಊರವರು ಕೂಡಾ ಆತನಿಗೆ ಬುದ್ದಿವಾದ ಹೇಳಿದ್ದರು. ಆದರೂ ಈ ಮುಖ್ಯ ಶಿಕ್ಷಕ ಹಳೆ ಚಾಳಿಯನ್ನು ಮುಂದುವರೆಸಿದ ಪರಿಣಾಮ, ಉಡುಪಿಯ ಮಹಿಳಾ ಮತ್ತು ಮಕ್ಕಳ ಕಲ್ಯಾಣಾ ಇಲಾಖೆ (ಮಕ್ಕಳ ಕ್ಷೇಮಾಭಿವೃದ್ಧಿ ಘಟಕ)ಯ ಅಧಿಕಾರಿಗಳು ಶಾಲೆಗೆ ಆಗಮಿಸಿ ಸಮಗ್ರ ತನಿಖೆ ನಡೆಸಿದ್ದರು.

ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದ ಅಪ್ರಾಪ್ತ ವಯಸ್ಸಿನ ಒಟ್ಟು 14 ವಿದ್ಯಾರ್ಥಿನಿಯರಿಂದ ದೂರು ಪಡೆದುಕೊಂಡಿದ್ದು, ಈ ಬಗ್ಗೆ ಸೂಕ್ತ ಸಾಕ್ಷ್ಯಧಾರಗಳನ್ನು ಸಂಗ್ರಹಿಸಿದ ಬಳಿಕವೇ ಈ ಕ್ರಮ ಕೈಗೊಂಡಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪೋಕೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಮುಖ್ಯ ಶಿಕ್ಷಕ ರಾಜೇಂದ್ರ ಆಚಾರ್ ಶಿಕ್ಷಕ ವೃತ್ತಿಯನ್ನು ನಿರ್ವಹಿಸುತ್ತಿದ್ದು ತನ್ನ ಸೇವಾವಧಿಯನ್ನು ವಿವಿಧ ಶಾಲೆಗಳಲ್ಲಿ ಪೂರೈಸಿದ್ದಾರೆ. ಪ್ರಸ್ತುತ ವರ್ಗಾವಣೆಗೊಂಡು ಬರಬೈಲು ಶಾಲೆಯ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಾನು ಕರ್ತವ್ಯ ನಿರ್ವಹಿಸಿದ ಎಲ್ಲಾ ಶಾಲೆಗಳಲ್ಲೂ ಆತನ ವಿರುದ್ದ ಇದೇ ಆರೋಪಗಳಿದ್ದವು.