ಉಡುಪಿ: ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಓಮ್ನಿ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಕ್ಷಣಮಾತ್ರದಲ್ಲಿ ಹೊತ್ತಿ ಉರಿದ ಘಟನೆ ಕಾರ್ಕಳ ಬೈಪಾಸ್ ಸರ್ಕಲ್ ಬಳಿ ಸಂಭವಿಸಿದೆ.
ಬೈಪಾಸ್ ಸರ್ಕಲ್ ಬಳಿ ನಿಲ್ಲಿಸಿದ್ದ ಓಮ್ನಿ ಕಾರಿನಲ್ಲಿ ಬ್ಯಾಟರಿ ಶಾರ್ಟ್ ಆಗಿ ಬೆಂಕಿ ಕಾಣಿಸಿಕೊಂಡಿದ್ದು, ನೋಡು ನೋಡುತ್ತಿದ್ದಂತೆ ಕಾರು ಧಗಧಗನೇ ಹೊತ್ತಿ ಉರಿದು ಸಂಪೂರ್ಣ ಸುಟ್ಟುಹೋಗಿದೆ.
ಸ್ಥಳೀಯರು ನೀರು ಹಾಕಿ ಬೆಂಕಿ ನಂದಿಸಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಬಳಿಕ ಅಗ್ನಿ ಶಾಮಕ ಇಲಾಖೆಯ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದರು. ಅಷ್ಟೊತ್ತಿಗೆ ಕಾರು ಸಂಪೂರ್ಣ ಬೆಂಕಿಗೆ ಆಹುತಿಯಾಗಿತ್ತು.