ಕಾಪು: ಸರಣಿ ಅಪಘಾತ; ಮುಗುಚಿ ಬಿದ್ದ ಶಾಲಾ ವಾಹನ

ಉಡುಪಿ : ಎರ್ಮಾಳು ತೆಂಕ ರಾಷ್ಟ್ರೀಯ ಹೆದ್ದಾರಿ 66ರ ಎರ್ಮಾಳ್ ಬಳಿ ಎರಡು ಕಾರು ಮತ್ತು ಶಾಲಾ ವಾಹನದ ನಡುವೆ ಸಂಭವಿಸಿದ ಸರಣಿ ಅಪಘಾತದಲ್ಲಿ ಶಾಲಾ ಬಸ್‌ ಮಗುಚಿ ಬಿದ್ದ ಘಟನೆ ಬುಧವಾರ ಸಂಜೆ ಸಂಭವಿಸಿದೆ.


ಉಡುಪಿಯಿಂದ ಮಂಗಳೂರು ಕಡೆ ಸಾಗುತ್ತಿದ್ದ ಕಾರೊಂದು ಮಹಿಳೆಗೆ ಡಿಕ್ಕಿ ಹೊಡೆದ ಬಳಿಕ ಉಡುಪಿ ಕಡೆ ಸಾಗುವ ಹೆದ್ದಾರಿ ಮಧ್ಯೆ ಪಲ್ಟಿಯಾಗಿದೆ. ಇದೇ ಸಂದರ್ಭ ಶಾಲಾ ವಿದ್ಯಾರ್ಥಿಗಳನ್ನು ಮನೆಗೆ ತಲುಪಿಸಿ, ಕಾಪು ಚಂದ್ರನಗರ ಕಡೆ ಸಾಗುತ್ತಿದ್ದ ಕ್ರೆಸೆಂಟ್ ಶಾಲಾ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಶಾಲಾ ವಾಹನ ಡಿವೈಡರ್ ದಾಟಿ ಮಂಗಳೂರು ಕಡೆ ಸಾಗುವ ಹೆದ್ದಾರಿಯಲ್ಲಿ ಮುಗುಚಿ ಬಿದ್ದಿದೆ. ಇದೇ ಸಂದರ್ಭ ಮಂಗಳೂರು ಕಡೆ ಸಾಗುತ್ತಿದ್ದ ಇನ್ನೋವಾ ಕಾರಿಗೂ ಮತ್ತೊಂದು ಕಾರು ಡಿಕ್ಕಿಯಾಗಿದೆ.


ಅಪಘಾತದಲ್ಲಿ 3 ವಾಹನಗಳ ಚಾಲಕರು ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಅಪಘಾತ ಸಂಭವಿಸುವ ಸಮಯ ಶಾಲಾ ಬಸ್‌ನಲ್ಲಿ ವಿದ್ಯಾರ್ಥಿಗಳು ಇಲ್ಲದ ಕಾರಣ ಸಂಭಾವ್ಯ ಅಪಾಯ ತಪ್ಪಿದೆ. ಟೋಲ್ ಸಿಬ್ಬಂದಿ ಕ್ರೇನ್ ಮೂಲಕ ಬಸ್ ಅನ್ನು ಮೇಲೆತ್ತುವಲ್ಲಿ ಸಹಕರಿಸಿದರು. ಘಟನಾ ಸ್ಥಳಕ್ಕೆ ಪಡುಬಿದ್ರಿ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.