ಕಾಪು ಶ್ರೀಹೊಸ ಮಾರಿಗುಡಿ ದೇವಸ್ಥಾನ: ಸ್ವರ್ಣಾಭರಣಗಳ ಪುರಪ್ರವೇಶ ಶೋಭಾಯಾತ್ರೆ

ಉಡುಪಿ: ಸಮಗ್ರ ಜೀರ್ಣೋದ್ಧಾರದೊಂದಿಗೆ ಬ್ರಹ್ಮಕಲಶೋತ್ಸವಕ್ಕೆ ಸಿದ್ಧಗೊಳ್ಳುತ್ತಿರುವ ಕಾಪು ಶ್ರೀಹೊಸ ಮಾರಿಗುಡಿ ದೇವಸ್ಥಾನದ ನೂತನ ಸ್ವರ್ಣ ಗದ್ದುಗೆ, ರಜತ ರಥ, ಬೃಹತ್ ಗಂಟೆ ಸಹಿತ ಸ್ವರ್ಣಾಭರಣಗಳ ಪುರಪ್ರವೇಶ ಶೋಭಾಯಾತ್ರೆಯು ಭಾನುವಾರ ನಡೆಯಿತು.

15 ಕೋಟಿ ರೂ. ವೆಚ್ಚದಲ್ಲಿ ಶ್ರೀಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ಮತ್ತು ಸ್ವರ್ಣ ಗದ್ದುಗೆ ಸಮರ್ಪಣಾ ಸಮಿತಿ‌ ನೇತೃತ್ವದಲ್ಲಿ ಭಕ್ತಾದಿಗಳ ಸಹಕಾರದೊಂದಿಗೆ ಗುಜ್ಜಾಡಿ ಸ್ವರ್ಣ ಜುವೆಲರ್ಸ್‌ನಲ್ಲಿ ಸ್ವರ್ಣ ಗದ್ದುಗೆ ಮತ್ತು ಮಾರಿಯಮ್ಮ ದೇವಿಯ ಚಿನ್ನದ ಮುಖ ನಿರ್ಮಾಣಗೊಂಡಿದೆ.

ಮುಂಬೈ ಉದ್ಯಮಿ ತೋನ್ಸೆ ಆನಂದ ಎಂ. ಶೆಟ್ಟಿ ಮತ್ತು ಶಶಿರೇಖಾ ಆನಂದ ಶೆಟ್ಟಿ ಅವರು ನೀಡಿದ ಮಂಗಳೂರು ಎಸ್.ಎಲ್. ಶೇಟ್ ಜುವೆಲರ್ಸ್‌ನಲ್ಲಿ ನಿರ್ಮಾಣಗೊಂಡಿರುವ ರಜತ ರಥ, ಮುಂಬೈ ಉದ್ಯಮಿ ಅರವಿಂದ್ ಶೆಟ್ಟಿ ಮತ್ತು ಪಲ್ಲವಿ ಶೆಟ್ಟಿ ದಂಪತಿ ಸಮರ್ಪಿಸಿದ ಅಯೋಧ್ಯೆ ಮಾದರಿಯ ಬೃಹತ್ ಗಂಟೆ, ಉಳಿಯಾರಗೋಳಿ ರಾಧಾಭಾಯ ದಿ. ಸುಂದರ ಶೆಟ್ಟಿ ಮತ್ತು ದಿ. ರಾಧಾ ಸುಂದರ ಶೆಟ್ಟಿ ಅವರ ಮಕ್ಕಳು ಹಾಗೂ ಮೂಳೂರು ಸುಧಾಕರ ಹೆಗ್ಡೆ ಮತ್ತು ರಂಜನಿ ಸುಧಾಕರ ಹೆಗ್ಡೆ ದಂಪತಿ ಸಮರ್ಪಿಸಿದ ರಾಜಗೋಪುರದ ಮಹಾದ್ವಾರದ ಬಾಗಿಲು ಹಾಗೂ ಉಚ್ಚಂಗಿ ದೇವಿಯ ಚಿನ್ನದ ಪಾದಪೀಠ, ಚಿನ್ನದ ಮುಖದ ಪುರಪ್ರವೇಶ ನಡೆಯಿತು.

ಶ್ರೀಕ್ಷೇತ್ರ ದಂಡತೀರ್ಥ ಮಠದಿಂದ ಹೊರಟ ಶೋಭಾಯಾತ್ರೆಯು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಾಗಿ ಕಾಪು ಪೇಟೆಯ ಮೂಲಕ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಪುರಪ್ರವೇಶ ನಡೆಯಿತು.