ಉಡುಪಿ: ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಜಿಲ್ಲೆಯ ಪಕ್ಷದ ವಿವಿಧ ಘಟಕಗಳು ಒಟ್ಟಾಗಿ ಏ. 24 ರಂದು ಬಿಜೆಪಿಯ ದಮನಕಾರಿ ಪ್ರವೃತ್ತಿಯ ವಿರುದ್ಧ ಪ್ರತಿಭಟನಾ ಸಭೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ ತಿಳಿಸಿದರು.
ಈ ಕುರಿತು ಕಾಪುವಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ನಾಯಕರು ಸೇರಿದಂತೆ ವಿವಿಧ ಘಟಕಗಳ ಪದಾಧಿಕಾರಿಗಳು, ಕಾರ್ಯಕರ್ತರ ಜೊತೆಗೂಡಿ ಏ.24 ರ ಬೆಳಿಗ್ಗೆ 10:30ರಿಂದ ಕಾಪು ಶ್ರೀ ಲಕ್ಷ್ಮೀ ಜನಾರ್ಧನ ದೇವಳದಿಂದ ಮೆರವಣಿಗೆಯ ಮೂಲಕ ಕಾಪು ಪೇಟೆಗೆ ಸಾಗಿಬರಲಿದ್ದಾರೆ. ಬಳಿಕ ಕಾಪು ಪೇಟೆಯಲ್ಲಿ ಬೃಹತ್ ಪ್ರತಿಭಟನಾ ಸಭೆ ಜರಗಲಿದೆ.
ಈ ಸಭೆಯಲ್ಲಿ ಕೇಂದ್ರ ಸರಕಾರದ ಬೆಲೆ ಏರಿಕೆ, ವಕ್ಫ್ ಕಾಯ್ದೆ, ನ್ಯಾಷನಲ್ ಹೆರಾಲ್ಡ್ ವಿಷಯದಲ್ಲಿ ಪಕ್ಷದ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪಕ್ಷದ ಮುಖಂಡರ ಮೇಲಿನ ಚಾಜ್೯ಶೀಟ್ ವಿರೋಧಿಸಿ ಪ್ರತಿಭಟನೆ ನಡೆಯಲಿದೆ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದ ಜನಾಕ್ರೋಶದ ಮೂಲಕ ಬಿಜೆಪಿ ನಾಯಕರು ರಾಜ್ಯಾದ್ಯಂತ ಸುತ್ತುತ್ತಿದ್ದಾರೆ. ಇದು ಜನಾಕ್ರೋಶವೋ ಅಥವಾ ಯತ್ನಾಳ್ ರನ್ನು ಹೊರಗಡೆ ಹಾಕಿದ ಬಗ್ಗೆ ಸಂಭ್ರಮೋಲ್ಲಾಸವೋ ತಿಳಿಯದು. ಜನಾಕ್ರೋಶ ಪ್ರಾರಂಭ ಮಾಡಿದ ದಿನದಂದೇ ಕೇಂದ್ರ ಸರಕಾರ ಗ್ಯಾಸ್ ಗೆ ರೂ.50 ಮತ್ತು ಪೆಟ್ರೋಲ್, ಡೀಸೆಲ್ಗೆ ರೂ. 2 ಹೆಚ್ಚಿಸಿದೆ. ಕೇಂದ್ರ ಸರಕಾರದ ನೀತಿಯಿಂದ ಜನಸಾಮಾನ್ಯರ ರಕ್ತ ಹೀರುವ ಕಾರ್ಯ ನಡೆಯುತ್ತಿದೆ. ವಾಸ್ತವ ವಿಚಾರಗಳನ್ನು ಜನರ ಗಮನಕ್ಕೆ ತರುವ ಕಾರ್ಯ ನಾವು ಮಾಡುತ್ತಿದ್ದೇವೆ. ವಕ್ಫ್ ಕಾಯಿದೆಗೂ ಸುಪ್ರೀಂ ಕೋರ್ಟ್ ತಾತ್ಕಾಲಿಕ ತಡೆ ನೀಡಿದೆ ಎಂದರು.
ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ಮಾತನಾಡಿ, ರಾಜ್ಯದ ಜನಪರ ಪಂಚ ಗ್ಯಾರಂಟಿ ಯೋಜನೆಯು ಬಿಜೆಪಿ ಪಕ್ಷಕ್ಕೆ ಸಹಿಸಲಾಗುವುದಿಲ್ಲ. ಕೇಂದ್ರ ನಾಯಕರ ಆದೇಶದಂತೆ ಬಿಜೆಪಿಯ ದಮನಿಸುವ ಕಾರ್ಯದ ವಿರುದ್ಧ ಕಾಪುವಿನಲ್ಲಿ ಪ್ರತಿಭಟನಾ ಸಭೆ ಹಮ್ಮಿಕೊಳ್ಳಲಾಗಿದೆ. ಸಭೆಯಲ್ಲಿ 5 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆಯಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಇಂಟಕ್ ಅಧ್ಯಕ್ಷ ಕಿರಣ್ ಹೆಗ್ಡೆ, ಉಡುಪಿ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಮಹಾಬಲ ಕುಂದರ್, ಕಾಪು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಂತಲತಾ ಶೆಟ್ಟಿ, ಉಡುಪಿ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶರ್ಫುದ್ದೀನ್ ಶೇಖ್, ಕಾಪು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ನಿಯಾಝ್ ಅಹಮದ್, ಪ್ರಚಾರ ಸಮಿತಿ ಅಧ್ಯಕ್ಷ ಜಿತೇಂದ್ರ ಪುಟಾರ್ಡೋ ಉಪಸ್ಥಿತರಿದ್ದರು.












