ಕಾಂಗ್ರೆಸ್ ನಲ್ಲಿ ಕದ್ದು ವಾಪಸು ಕೊಟ್ಟರೆ ಅಪರಾಧಿಗಳಲ್ಲ‌ ಎಂಬ ಕಾನೂನು ಜಾರಿಯಲ್ಲಿದೆ: ಛಲವಾದಿ ನಾರಾಯಣಸ್ವಾಮಿ

ಉಡುಪಿ: ಕಾಂಗ್ರೆಸ್ ನಲ್ಲಿ ಹೊಸ ಅಲಿಖಿತ ಕಾನೂನು ಜಾರಿಗೆ ಬಂದಿದೆ. ಯಾರು ಬೇಕಾದರೂ ಕದಿಯಬಹುದು. ವಾಪಸು ಕೊಟ್ಟ ನಂತರ ಅವರು ಅಪರಾಧಿಗಳಲ್ಲ‌. ಈ ರೀತಿಯಲ್ಲಿ ಕಾಂಗ್ರೆಸ್ ನವರು ನಡೆದುಕೊಳ್ಳುತ್ತಿದ್ದಾರೆ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು.
ಉಡುಪಿಯಲ್ಲಿ‌ ಇಂದು ನಡೆದ ಜನಪ್ರತಿನಿಧಿಗಳ ಸಮಾವೇಶಕ್ಕೆ ಆಗಮಿಸಿದ್ದ ಅವರು, ಮಲ್ಲಿಕಾರ್ಜುನ್ ಖರ್ಗೆ ಸೈಟ್ ವಾಪಸ್ ನೀಡಿದ ವಿಚಾರಕ್ಕೆ ಪ್ರತಿಕ್ರಿಯಿಸಿದರು.
ಸೈಟ್ ವಾಪಸ್ ಕೊಟ್ಟರೆ ನಮ್ಮ ಹೋರಾಟದ ವೇಗ ಕಡಿಮೆಯಾಗುವುದಿಲ್ಲ. ನಮ್ಮ ಪಕ್ಷದ ಅಧ್ಯಕ್ಷರ ನೇತೃತ್ವದಲ್ಲಿ ಚೆನ್ನಾಗಿ ಹೋರಾಟ ಮಾಡುತ್ತಿದ್ದೇವೆ. ಐದು ವರ್ಷ ಆದ ನಂತರ ಇರಬಹುದಾದ ವಾತಾವರಣ ಈಗಲೇ ಇದೆ. ಚುನಾವಣೆಯ ಕಾಲ ಏನೋ ಅನ್ನುವ ವಾತಾವರಣ ಇದೆ‌ ಎಂದರು.
ಸಿದ್ದರಾಮಯ್ಯನವರು ಬಿಜೆಪಿಯವರು ಹೇಳಿದ ತಕ್ಷಣ ನಾನು ಬಟ್ಟೆ ಹರಿದುಕೊಳ್ಳುವುದಿಲ್ಲ. ನಾನು ಕೇರ್ ಮಾಡುವುದಿಲ್ಲ ಎಂದು ಹೇಳಿದ್ದಾರೆ. ನಾವೇನು ಬಟ್ಟೆ ಹರಿದುಕೊಳ್ಳುವುದಿಲ್ಲ. ಅವರಿಗೆ ತಲೆ ಇಲ್ಲ ಹಾಗಾಗಿ ತಲೆ ಕೆಡಿಸಿಕೊಳ್ಳುತ್ತಿಲ್ಲ. ಮೈಪರಚಿಕೊಂಡು ಓಡಾಡುತ್ತಿರುವುದು ಯಾರೆಂದು‌ ರಾಜ್ಯದ ಜನತೆಗೆ ಗೊತ್ತಿದೆ ಎಂದು‌ ಕುಟುಕಿದರು.
ಯೋಗೇಶ್ವರ್ ಬಂಡಾಯ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಪಕ್ಷದ ಅಧ್ಯಕ್ಷರು, ಎಲ್ಲಾ ಹಿರಿಯರು ಯೋಗೇಶ್ವರ್ ಜೊತೆ ಸಂಪರ್ಕದಲ್ಲಿದ್ದಾರೆ. ಯಾವುದೇ ತೊಂದರೆ ಆಗೋದಿಲ್ಲ ಎಂದರು.