ಉಡುಪಿ: ಜಿಲ್ಲೆಯ ಎಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾಮಗಾರಿ ನಡೆಸುತ್ತಿರುವ ನಿರ್ಮಾಣದಾರರು, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ (ಉದ್ಯೋಗ ಕ್ರಮೀಕರಣ ಮತ್ತು ಸೇವಾ ಷರತ್ತುಗಳು) ಕಾಯಿದೆ, 1996 ಹಾಗೂ ಕರ್ನಾಟಕ ನಿಯಮಗಳು 2006 ರಡಿ ನಿರ್ಮಾಣ ಕಾಮಗಾರಿಯಲ್ಲಿ ಕೆಲಸ ಮಾಡುವ ಕಾರ್ಮಿಕರ ಸುರಕ್ಷತೆ ವಹಿಸುವುದು ನಿರ್ಮಾಣದಾರರ ಜವಬ್ದಾರಿಯಾಗಿರುತ್ತದೆ.
ಈಗಾಗಲೇ ಮಳೆಗಾಲ ಪ್ರಾರಂಭವಾಗಿದ್ದು, ಕಾಮಗಾರಿ ಆರಂಭ ಮಾಡಿರುವ ಸ್ಥಳಗಳಲ್ಲಿ ಭೂಕುಸಿತ, ಅಪಘಾತ ಹಾಗೂ ಅವಘಡ ಉಂಟಾಗದಂತೆ ಸೂಕ್ತ ಕ್ರಮಗಳನ್ನು ತಕ್ಷಣ ತೆಗೆದುಕೊಂಡು ಯಾವುದೇ ಕಾರ್ಮಿಕರ ಜೀವ ಹಾನಿಯಾಗದಂತೆ ಕಾಮಗಾರಿ ನಡೆಸಬೇಕು. ಮುನ್ನೆಚ್ಚರಿಕೆ ವಹಿಸಲು ಸಾಧ್ಯವಿಲ್ಲದಿದ್ದಲ್ಲಿ ಅಂತಹ ಕಾಮಗಾರಿಯನ್ನು ತತ್ಕ್ಷಣ ಸುರಕ್ಷತಾ ದೃಷ್ಠಿಯಿಂದ ನಿಲ್ಲಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿರುತ್ತಾರೆ.
ಯಾವುದೇ ಸುರಕ್ಷತೆ ವಹಿಸದೆ ಅಪಘಾತವಾಗಿ ಕಾರ್ಮಿಕರ ಜೀವಹಾನಿ ಹಾಗೂ ಇನ್ನಿತರ ಅವಘಡವಾದಲ್ಲಿ ಅಂತಹ ಕಾಮಗಾರಿಯ ನಿರ್ಮಾಣದಾರರ ವಿರುದ್ಧ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ (ಉದ್ಯೋಗ ಕ್ರಮೀಕರಣ ಮತ್ತು ಸೇವಾ ಷರತ್ತುಗಳು) ಕಾಯಿದೆ 1996 ರಡಿ ಕಾನೂನು ಕ್ರಮ ಜರುಗಿಸುವುದರೊಂದಿಗೆ ಸದರಿ ಕಾಯಿದೆಯ ನಿಯಮ 269 (1) ರಡಿ ನಿರ್ಮಾಣ ಕಾಮಗಾರಿಯನ್ನು ಸ್ಥಗಿತಗೊಳಿಸಲು ಆದೇಶಿಸಲಾಗುವುದು ಜೊತೆಗೆ ನಿಯಮ ಉಲ್ಲಂಘನೆಯ ಪ್ರಕರಣಗಳಿಗೆ 3 ತಿಂಗಳವರೆಗೆ ಜೈಲು ಶಿಕ್ಷೆ ಅಥವಾ ದಂಡವನ್ನು ನ್ಯಾಯಾಲಯ ವಿಧಿಸಬಹುದಾಗಿದೆ ಅಥವಾ ಶಿಕ್ಷೆ ಮತ್ತು ದಂಡ ಎರಡನ್ನು ವಿಧಿಸಬಹುದಾಗಿದೆ. ಆದ್ದರಿಂದ ನಿರ್ಮಾಣ ಸ್ಥಳದಲ್ಲಿ ಸುರಕ್ಷತೆಗಾಗಿ ಮುನ್ನೆಚ್ಚರಿಕೆ ವಹಿಸಿ ಕಾರ್ಮಿಕರ ಹಿತಾಸಕ್ತಿಯನ್ನು ಕಾಪಾಡಿಕೊಂಡು ಕಾನೂನು ಪಾಲನೆ ಮಾಡುವಂತೆ ಜಿಲ್ಲಾ ಕಾರ್ಮಿಕ ಅಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.